ಚಿತ್ರದುರ್ಗ : ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಿಂದಲೇ ಬಿಜೆಪಿಯವರು ಎಳೆ ವಯಸ್ಸಿನ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದಾರ್ಶನಿಕರಿಗೆ ಬಿಜೆಪಿ ಅಪಮಾನ ಮಾಡುತ್ತಿದೆ ಎಂಬ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರ ಬೇಡ ಅಂದ್ರೆ ಮಕ್ಕಳಿಗೆ ಇನ್ನೇನು ಹೇಳುವುದು. ಜನರೇ ಮೌನವಾಗಿದ್ದಾಗ ಏನು ಮಾಡಲು ಸಾಧ್ಯವಿಲ್ಲ. ಆದ್ರೆ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಜನರು ಪ್ರತಿಭಟಿಸಿದಾಗ ಸರ್ಕಾರಕ್ಕೆ ಭಯ ಬರುತ್ತದೆ ಎಂದರು.
ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಇರುವ ಕಡೆಗಳಲ್ಲಿ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ.
ಕರ್ನಾಟಕ ಆಯ್ತು, ಮಧ್ಯಪ್ರದೇಶ ಆಯ್ತು ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ವಾಮಮಾರ್ಗ ಹಿಡಿದು ಸರ್ಕಾರ ರಚಿಸಲು ಕಾರ್ಯಪ್ರವೃತವಾಗಿದೆ. ಸಮ್ಮಿಶ್ರ ಸರ್ಕಾರ ಇರುವ ಕಡೆಯೆಲ್ಲ ಆಪರೇಷನ್ ಕಮಲ ಮಾಡಿ ಸರ್ಕಾರ ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು.