ರಾಜ್ಯ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡದಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರದಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಗಿದೆ.
ಜೆಡಿಎಸ್ ಮುಖಂಡರು ಕನ್ನಡ ಶಾಲು ಧರಿಸಿ ಹಾಗೂ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸರಕಾರ ರಾಜ್ಯದಲ್ಲಿ ಕನ್ನಡವನ್ನು ಧಿಕ್ಕರಿಸಿ ಹಿಂದಿ ದಿವಸ ಆಚರಿಸುತ್ತಿರುವುದು, ಅದಕ್ಕೆ ರಾಜ್ಯ ಬಿಜೆಪಿ ಸರಕಾರ ಬೆಂಬಲ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಕೇಂದ್ರ ಸರ್ಕಾರಕ್ಕೆ ಭಾಷಾ ಸಹಿಷ್ಣುತೆ ಇಲ್ಲ. ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ಪದೇಪದೆ ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಪ್ರಾದೇಶಿಕ ಭಾಷೆಗಳನ್ನು, ಮುಖ್ಯವಾಗಿ ಕನ್ನಡವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ದೇಶದಲ್ಲಿ ನಾನಾ ಭಾಷೆ ಮಾತಾಡುವ ನಾಗರೀಕರು ಇದ್ದಾರೆ. ಈಗಾಗಲೇ ಅಮೃತ ಮಹೋತ್ಸವ ಮಾಡಿದ್ದೇವೆ. ಅದರೂ ಕೇಂದ್ರ ಬಿಜೆಪಿ ಸರ್ಕಾರ ಕೇವಲ ಒಂದು ಭಾಷೆಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಿರುವುದು ಸರಿಯಲ್ಲಿ ಎಂದು ಕಿಡಿಕಾರಿದರು.