ಹೌದು, ನನ್ನ ತಾಯಿ ನಾನು ಕೇಳಿದಾಗ ಊಟ ಹಾಕುವುದಿಲ್ಲ. ಊಟ ಕೇಳಲು ಹೋದಾಗ ನನಗೆ ಥಳಿಸುತ್ತಾರೆ. ಸರಿಯಾದ ಸಮಯಕ್ಕೆ ಅಡುಗೆ ಮಾಡುವುದಿಲ್ಲ. ಅಡುಗೆ ಮಾಡು ಎಂದು ಕೇಳಿದರೂ ಅಡುಗೆ ಮಾಡುವುದಿಲ್ಲ. ಅಷ್ಟೇ ಅಲ್ಲ, ಮನೆಯ ಇತರ ಸದಸ್ಯರಿಗೂ ಅಡುಗೆ ಮಾಡಲು ಬಿಡುವುದಿಲ್ಲ. ಯಾರಾದರೂ ಅಡುಗೆ ಮಾಡಿದರೆ, ಅವರಿಗೂ ಹೊಡೆಯುತ್ತಾಳೆ ಎಂದು ಎಂಟು ವರ್ಷದ ಬಾಲಕ ತಾಯಿ ವಿರುದ್ಧದ ದೂರಿನೊಂದಿಗೆ ಸೀತಾಮರ್ಹಿ ನಗರ ಠಾಣೆಗೆ ಬಂದಿದ್ದಾನೆ. ಈ ಬಾಲಕ ಕಣ್ಣೀರು ಸುರಿಸುತ್ತಾ ತನ್ನ ಅಳಲನ್ನು ಪೊಲೀಸರಿಗೆ ವಿವರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೊದಲು ಬಾಲಕನ ಸಂಪೂರ್ಣ ಅಹವಾಲು ಮೌನವಾಗಿಯೇ ಎಸ್‌ಎಚ್‌ಒ ರಾಕೇಶ್‌ಕುಮಾರ್ ಆಲಿಸಿದ್ದಾರೆ. ನಂತರ ಅವರೇ ಊಟ ತರಿಸಿ ತಿನ್ನಿಸಿದ್ದಾರೆ. ಬಳಿಕ ಬಾಲಕನ ಕುಟುಂಬ ಸದಸ್ಯರನ್ನು ಠಾಣೆಗೆ ಕರೆಸಿ, ಬಾಲಕನಿಗೆ ಸಮಯಕ್ಕೆ ಸರಿಯಾಗಿ ಊಟ ನೀಡಬೇಕು ಮತ್ತು ಅವನಿಗೆ ಹೊಡೆಯಬಾರದು ಎಂದು ಕುಟುಂಬ ಸದಸ್ಯರಿಗೆ ಸೂಚಿಸಿ ಕಳುಹಿಸಿದ್ದಾರೆ.