ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಕಡಿತ ಮಾಡಿದ್ದರಿಂದ ಬಡಜನತೆಗೆ ತೊಂದರೆಯಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ ಮಾತನಾಡಿರುವ ಅವರು, ಅನ್ನಭಾಗ್ಯ ಯೋಜನೆ ಕುರಿತು ಪುನರ್ ಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಾಯಿಸುವುದಾಗಿ ತಿಳಿಸಿದರು.
ರೈತರ ಸಾಲಮನ್ನಾ ಮಾಡಿದ್ದು ಸ್ವಾಗತಾರ್ಹ ವಿಷಯವಾಗಿದೆ. ಅಲ್ಲದೇ ರಾಜ್ಯದ ರೈತರ ನಿರೀಕ್ಷೆ ಪೂರೈಕೆಗಾಗಿ ಬೆಲೆ ಏರಿಕೆ ಅನಿವಾರ್ಯವಾಗಲಿದೆ. ಪೆಟ್ರೋಲ್, ಡೀಸೇಲ್, ವಿದ್ಯುತ್ ದರ ಅನಿವಾರ್ಯವಾಗಿ ಏರಿಕೆ ಆಗಲಿದೆ. ಕೇಂದ್ರ ಸರಕಾರ ಸರಿಯಾಗಿ ಅನುದಾನ ಕೊಡದ ಕಾರಣದಿಂದ ಬೆಲೆ ಏರಿಕೆ ಮಾಡಬೇಕಾಗಿದೆ ಎಂದರು.
ರಾಜ್ಯದ ಸಂಪನ್ಮೂಲ ಕ್ರೂಢಿಕರಣ ಮಾಡುವುದು ಮುಖ್ಯಮಂತ್ರಿಯ ಜವಾಬ್ದಾರಿಯಾಗಿದೆ. ಹಾಗಾಗಿ ಬೆಲೆ ಏರಿಕೆ ಮಾಡಿದ್ದಾರೆ. ಆದರೆ ಅನ್ನಭಾಗ್ಯ ಅಕ್ಕಿ ಪ್ರಮಾಣ ಕಡಿತ ಮಾಡಿರುವುದು ಜನರಿಗೆ ಮಾಡಿರುವ ಅನ್ಯಾಯವಾಗಿದೆ. ಅನುಮೋದನೆ ಸಿಗುವ ಮೊದಲು ಪುನರ್ ಪರಿಶೀಲನೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದ್ದಾರೆ.