ಕಳೆದ ಒಂದು ತಿಂಗಳಿಂದ ಆ ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆ ಭಾರೀ ಅನಾಹುತವನ್ನೇ ಸೃಷ್ಠಿಸಿದೆ. ಇದರ ಪರಿಣಾಮವನ್ನು ಇಂದಿಗೂ ಮಲೆನಾಡಿನ ಜನರು ಅನುಭವಿಸುತ್ತಿದ್ದಾರೆ. ಬರೋಬ್ಬರಿ 736 ಗ್ರಾಮಗಳು ಕಗ್ಗತ್ತಲ್ಲಿ ಮುಳುಗಿವೆ. ಎಲ್ಲೆಡೆ ಸಂಪೂರ್ಣ ಸಂಪರ್ಕವೇ ಕಳೆದುಹೋದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 88 ಕೋಟಿಗೂ ಅಧಿಕ ಆಸ್ತಿ-ಪಾಸ್ತಿ ಮಳೆಯಿಂದ ಇದುವರೆಗೂ ನಷ್ಟವಾಗಿದೆ. ಇದರಲ್ಲಿ ಮೆಸ್ಕಾಂಗೆ ಅತಿಹೆಚ್ಚು ಹಾನಿಯುಂಟಾಗಿದೆ. ದಶಕದ ನಂತರ ಮತ್ತೆ ಮಲೆನಾಡಿನಲ್ಲಿ ಮಳೆ ಆರ್ಭಟಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅತಿವೃಷ್ಟಿಯನ್ನೇ ಸೃಷ್ಠಿಸಿದೆ. ಶೃಂಗೇರಿ ಪಟ್ಟಣವೇ ನಾಲ್ಕೈದು ಬಾರಿ ಮುಳುಗಿ ಎಲ್ಲೆಡೆ ವ್ಯಾಪಕ ಅವಾಂತರವನ್ನೇ ತಂದಿಟ್ಟಿದೆ. ವರುಣನ ಸ್ಫೋಟಕ್ಕೆ ತತ್ತರಿಸಿರುವ ಮಲೆನಾಡಿನ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಜಿಲ್ಲೆಯಲ್ಲಿ 736 ಗ್ರಾಮಗಳು ವಿದ್ಯುತ್ ಸಂಪರ್ಕವನ್ನೇ ಕಳೆದುಕೊಂಡಿವೆ. ಕತ್ತಲಲ್ಲೇ ಬದುಕು ಸಾಗಿಸುವಂತೆ ಮಾಡಿದೆ.
ಎಲ್ಲೆಲ್ಲೂ ಮಳೆಯ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನೇರ ಪರಿಣಾಮ ವಿದ್ಯುತ್ ಸಂಪರ್ಕದ ಮೇಲೆ ಬಿದ್ದಿದೆ. ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳು ತುಂಡು ತುಂಡಾಗಿ ಬಿದ್ದು ಸಾವಿರಾರು ಮನೆಗಳ ಮೀಟರ್ ಬಾಕ್ಸ ಗಳು ಕೆಟ್ಟು ಹೋಗಿವೆ. ಇದು ಇಡೀ ಮಲೆನಾಡನ್ನು ಕಗ್ಗತ್ತಲಲ್ಲಿ ಮುಳುಗುವಂತೆ ಮಾಡಿದೆ. ಜನರು ರಾತ್ರಿ ಬಂತು ಎಂದರೆ ಜೀವ ಕೈಯಲ್ಲಿ ಹಿಡಿದು ಮಲಗುವ ದುಸ್ಥಿತಿ ಎದುರಾಗಿದೆ.
ಇಡೀ ಮಲೆನಾಡನ್ನು ಕತ್ತಲಲ್ಲಿ ಮುಳುಗಿಸಿರುವ ವರುಣನ ರೌದ್ರ ನರ್ತನ ತಹಬದಿಗೆ ಬರಲು ಇನ್ನೂ ಸಾಕಷ್ಟು ದಿನಗಳು ಬೇಕು ಎನ್ನುವ ಅಧಿಕಾರಿಗಳು, ನಿರಂತರ ಮಳೆ ಮುಂದುವರೆದಿರುವುದು ಹಾನಿ ಪರಿಹಾರ ಕಾಮಗಾರಿಗೆ ಹಿನ್ನಡೆ ಉಂಟುಮಾಡಿದೆ. ಅಧಿಕಾರಿಗಳು ಸರ್ಕಾರಕ್ಕೆ ಹೆಚ್ಚಿನ ಹಣಕ್ಕೆ ಪ್ರಸ್ತಾವನೆ ಸಲ್ಲಿಸಿ ಕಾಯುತ್ತಿದ್ದಾರೆ.