ಬೆಂಗಳೂರು: ಎರಡು ದಿನದಿಂದ ಚಳಿಯ ಅಬ್ಬರಕ್ಕೆ ನಲುಗಿ ಹೋಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇಂದಿನಿಂದ ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ತಮಿಳುನಾಡು ಹಾಗೂ ಚೈನ್ನೈ ಭಾರೀ ಮಳೆಗೆ ತತ್ತರಿಸಿ ಹೋಗಿವೆ.
ಬೆಂಗಳೂರು ಸೇರಿದಂತೆ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಭಾಗದಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಕಳೆದೆರಡು ದಿನಗಳಿಂದಲೂ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಮೋಡ ಕವಿದ ವಾತಾವರಣವಿದೆ. ಹೀಗಾಗಿ ಮತ್ತೆ ನಗರದಲ್ಲಿ ಮಳೆ ತನ್ನ ರೌದ್ರಾವತಾರ ತೋರುವ ಮುನ್ಸೂಚನೆ ನೀಡಿದೆ.