ಬೆಂಗಳೂರು: ಡಬಲ್ ಎಂಜಿನ್ ಸರ್ಕಾರ ನಾಡಿಗೆ ಡಬಲ್ ದ್ರೋಹ ಎಸಗಿದೆ. ಸರ್ಕಾರ ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದೆ. ಸರ್ಕಾರ ರಾಜ್ಯಪಾಲರ ಮಾತಿನ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿದೆ. ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟೀಕಿಸಿದರು.
ಸೋಮವಾರ ರಾಜ್ಯಪಾಲರ ಭಾಷಣಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಪ್ರಸ್ತಾಪವೇ ಇಲ್ಲ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ ಎಂದರು.
ಯಾವುದೇ ನಾಗರಿಕ ಸರ್ಕಾರಕ್ಕೆ ನಿರ್ಧಿಷ್ಟವಾದ ಗೊತ್ತು-ಗುರಿಗಳಿರುತ್ತವೆ. ಆದರೆ, ರಾಜ್ಯಪಾಲರ ಭಾಷಣ ಕೇಳಿದ ಮೇಲೆ, ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳಿಲ್ಲ ಎಂದು ಸ್ಪಷ್ಟವಾಗುತ್ತದೆ. ರಾಜ್ಯದ ಜನರಿಗೆ ಕಲ್ಯಾಣವೂ ಇಲ್ಲ. ಅಭಿವೃದ್ಧಿಯ ಮಾತೇ ಇಲ್ಲ ಎಂದು ಆರೋಪಿಸಿದರು.
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರ ಭಾಷಣದಲ್ಲಿ 116 ಪ್ಯಾರಾಗಳಿವೆ. ಅದರಲ್ಲಿ 23 ಪ್ಯಾರಾಗಳು ಕೋವಿಡ್ ಮತ್ತು ಪ್ರವಾಹಕ್ಕೆ ಸಂಬಂಧಪಟ್ಟಿವೆ. ಇನ್ನುಳಿದಂತೆ ಸುಮಾರು 30 ಪ್ಯಾರಾಗಳು ಹಳೆಯವು ಮತ್ತು ಭರವಸೆಗಳಾಗಿವೆ. ಹಾಗೂ ನಮ್ಮ ರ‍್ಕಾರದ ಸಾಧನೆಗಳೂ ಇವೆ. ಕೆಲವಕ್ಕೆ ಹೆಸರು ಬದಲಾಯಿಸಲಾಗಿದೆ ಎಂದು ಕಿಡಿಕಾರಿದರು.
ಈ ಸರ್ಕಾರ ಅತ್ಯಂತ ನಿಷ್ಕ್ರಿಯವಾಗಿದೆ. ವೈಫಲ್ಯಗಳಿಂದ ಕೂಡಿದೆ. ಜನರಿಗಾಗಿ ಏನೂ ಮಾಡುತ್ತಿಲ್ಲ ಎಂಬುದು ರಾಜ್ಯಪಾಲರ ಭಾಷಣದಿಂದ ಸ್ಪಷ್ಟವಾಗಿದೆ. ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಇಷ್ಟೊಂದು ಕೆಟ್ಟದಾದ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಅರ್ಥವಾಗಿದೆ ಎಂದರು.