ಸೆ.18ರಿಂದ ಕರೆಯಲಾಗಿರುವ ವಿಶೇಷ ಸಂಸತ್ ಅಧಿವೇಶನ ಹಳೆಯ ಸಂಸತ್ ಭವನದಲ್ಲಿ ಆರಂಭವಾಗಲಿದ್ದು, ಗಣೇಶ ಹಬ್ಬದ ಪ್ರಯುಕ್ತ ಇದನ್ನು ಸೆ.19ರಿಂದ ಹೊಸ ಸಂಸತ್ ಕಟ್ಟಡಕ್ಕೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ. ಸೆ.18ರಿಂದ 5 ದಿನಗಳ ಕಾಲ 17ನೇ ಲೋಕಸಭೆಯ ವಿಶೇಷ ಆಧಿವೇಶನ ಕರೆಯಲಾಗಿದ್ದು, ಈ ವೇಳೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು. ಹೊಸ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಆದರೂ ಕಳೆದ ತಿಂಗಳು ಮುಕ್ತಾಯವಾದ ಮುಂಗಾರು ಅಧಿವೇಶನವನ್ನು ಹಳೆ ಸಂಸತ್ ಭವನದಲ್ಲೇ ನಡೆಸಲಾಗಿತ್ತು. ಇದೀಗ ಕರೆದಿರುವ ವಿಶೇಷ ಆಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳೂ ತಿಳಿಸಿವೆ.