ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಮತ ಎಣಿಕೆ ಕಾರ್ಯವು 4 ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಈ ಪೈಕಿ ನಾಲ್ಕೂ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ನಗರದಲ್ಲಿರುವ ಸೆಂ. ಜೋಸೆಫ್ ಇಂಡಿಯನ್ ಹೈ ಸ್ಕೂಲ್ ನಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿ ಇರಲಿದ್ದು, ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತದೆ. ಪ್ರತಿ ಎಣಿಕಾ ಕೊಠಡಿಗೆ ಸಾಮಾನ್ಯವಾಗಿ 10 ರಿಂದ 14 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಅದರಲ್ಲಿ 2 ಟೇಬಲ್ ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿರುತ್ತದೆ ಎಂದು ಹೇಳಿದರು.
ಬೆಂಗಳೂರು ನಗರದ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಡಾ. ದಯಾನಂದ್ ರವರು ಮಾತನಾಡಿ, ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ. 13 ರಂದು ನಡೆಯಲಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಟೇಬಲ್ ಗಳಿಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆಯಿರುತ್ತದೆ. ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಕರಿಗೆ ಈಗಾಗಲೇ ತರಬೇತಿಯನ್ನು ಸಹಾ ನೀಡಲಾಗಿದೆ. ಮೇ 12 ರಂದು, ಮೈಕ್ರೋ ಅಬ್ಸರ್ವರ್ಸ್, ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಕರಿಗೆ ಮತ್ತೊಂದು ಬಾರಿ ತರಬೇತಿಯನ್ನು ನೀಡಲಾಗುವುದು. ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಿದ್ದು, ಮೂರು ಹಂತದದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ಆವರಣದಲ್ಲಿ ಪಾರ್ಕಿಂಗ್ ವ್ಯಸವ್ಥೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಯಲಹಂಕ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳಿರುವುದರಿಂದ 2 ಬ್ಯಾಲೇಟ್ ಯುನಿಟ್ ಗಳು ಬರಲಿವೆ. ಉಳಿದ ವಿಧಾನಸಭಾ ಕ್ಷೇತ್ರಗಳಿಗೆ 1 ಬ್ಯಾಲೇಟ್ ಯುನಿಟ್ ಗಳು ಬರಲಿವೆ ಎಂದು ತಿಳಿಸಿದರು.