ಓಮಿಕ್ರಾನ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಸಧ್ಯಕ್ಕೆ ಸಿನಿಮಾ, ಮಾಲ್‍ಗಳಿಗೆ ಯಾವುದೇ ನಿಬಂಧ ವಿಧಿಸುವ ತೀರ್ಮಾನ ಕೈಗೊಂಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದಿಲ್ಲಿ ಸ್ಪಷ್ಟಪಡಿಸಿದರು.ನಗರದಲ್ಲಿ ಪ್ರತಿನಿತ್ಯ 150 ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರರ್ಥ ನಮ್ಮಿಂದ ಇನ್ನು ಸೋಂಕು ದೂರವಾಗಿಲ್ಲ ಹೀಗಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವವರ ವಿರುದ್ಧ ದಂಡ ಪ್ರಯೋಗ ಮಾಡಲು ಈಗಾಗಲೇ ಮಾರ್ಷಲ್‍ಗಳ 54 ತಂಡ ರಚನೆ ಮಾಡಲಾಗಿದೆ. ಅವರ ಕಾರ್ಯಕ್ಕೆ ಗೃಹ ರಕ್ಷಕ ದಳದ ಸಿಬ್ಬಂದಿಗಳು ಸಾಥ್ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ನಗರದಲ್ಲಿ ಓಮಿಕ್ರಾನ್ ಸೋಂಕು ಹರಡದಂತೆ ನೋಡಿಕೊಳ್ಳಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದುವರೆಗೂ ಒಂದೇ ಕಡೆ 10 ಸೋಂಕು ಪ್ರಕರಣಗಳು ಪತ್ತೆಯಾದರೆ ಆ ಪ್ರದೇಶವನ್ನು ಕ್ಲಸ್ಟರ್ ಎಂದು ಘೋಷಣೆ ಮಾಡಲಾಗುತ್ತಿತ್ತು. ಆದರೆ, ಓಮಿಕ್ರಾನ್ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಒಂದು ಕಡೆ 3 ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಆ ಸ್ಥಳವನ್ನುಕ್ಲಸ್ಟರ್ ಎಂದು ಘೋಷಣೆ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.