ದೇಶಾದ್ಯಂತ ಡಿಜಿಟಲ್ ಇಂಡಿಯಾ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಬಗ್ಗೆ ದೊಡ್ಡ ಮಟ್ಟದ ಪ್ರಚಾರವೇ ನಡೆಯುತ್ತಿದೆ.
ಆದರೆ ಇದೇ ತಂತ್ರಜ್ಞಾನವನ್ನು ವಿದ್ರೋಹಿ ಸಂಘಟನೆಗಳು ದುರ್ಬಳಕೆ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ್ದು, ಪ್ರತಿನಿತ್ಯ ಕೋಟ್ಯಂತರ ರೂ. ವಂಚಿಸಲಾಗುತ್ತಿದೆ.
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧದ ಮೂಲ ಬಹುತೇಕ ಉತ್ತರ ಭಾರತದ ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ದಿಲ್ಲಿ, ಒಡಿಶಾ ಆಗಿದೆ. ವಿದ್ರೋಹಿ ಸಂಘಟನೆಯಲ್ಲಿ ಗುರುತಿಸಿಕೊಂಡವರು ಆ ರಾಜ್ಯದ ಕುಗ್ರಾಮ, ಆದಿವಾಸಿಗಳು, ಹಳ್ಳಿಯಲ್ಲಿರುವ ಮುಗ್ಧ ಜನರ ಆಧಾರ್ ಕಾರ್ಡನ್ನು 1 ಸಾವಿರ ರೂ.ಗೆ ಪಡೆದು ಅದೇ ಆಧಾರದಲ್ಲಿ ಮೊಬೈಲ್ ಸಿಮ್ ಪಡೆಯುತ್ತಾರೆ. ಬಳಿಕ ಅದನ್ನೇ ದಾಖಲೆಯಾಗಿಟ್ಟು ಆನ್ಲೈನ್ ಮೂಲಕ ಬ್ಯಾಂಕ್ ಖಾತೆ ತೆರೆದು ದಂಧೆ ಶುರುವಿಟ್ಟುಕೊಳ್ಳುತ್ತಾರೆ.
ಪೆಟ್ರೋಲ್ ಬಂಕ್, ಶಾಪಿಂಗ್ ಮಾಲ್, ಮೆಡಿಕಲ್ ಸೇರಿದಂತೆ ನಾನಾ ಕಡೆ ಪೇಟಿಎಂ, ಕ್ಯೂಆರ್ ಕೋಡ್ ಹಾಕಲಾಗುತ್ತಿದ್ದು, ಆ ಮೂಲಕ ಗ್ರಾಹಕರು ಪೇಮೆಂಟ್ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಈ ವ್ಯವಹಾರ ಕೂಡ ಡೇಂಜರ್ ಆಗಿದ್ದು, ಒರಿಜಿನಲ್ ಕ್ಯೂಆರ್ ಕೋಡ್ ಮೇಲೆ ಯಾರದೋ ಕ್ಯೂಆರ್ ಕೋಡ್ ಲಗತ್ತಿಸಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿದೆ ಬಂದಿದೆ ಎನ್ನುತ್ತಾರೆ ಸೈಬರ್ ಪೊಲೀಸರು.