ರಾಜ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮರಳು ಒದಗಿಸುವ ಉದ್ದೇಶದಿಂದ 'ಎಂ ಸ್ಯಾಂಡ್' ಉತ್ಪಾದನೆ ಹೆಚ್ಚಿಸಲಾಗುವುದು. ಈ ಸಂಬಂಧ ಮರಳು ನೀತಿಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ದಿನೇ ದಿನೆ ರಾಜ್ಯದಲ್ಲಿ ಮರಳಿನ ಬೇಡಿಕೆ ಹೆಚ್ಚಾಗುತ್ತಿದೆ. ಅಗತ್ಯದಷ್ಟು ಮರಳು ಪೂರೈಕೆ ಮಾಡುವ ಉದ್ದೇಶದಿಂದ ಎಂ ಸ್ಯಾಂಡ್ ಉತ್ಪಾದನೆಗಾಗಿ ಕಲ್ಲು ಪುಡಿ ಮಾಡುವ ಘಟಕಗಳಿಗೆ ಸರ್ಕಾರದಿಂದ ಹೆಚ್ಚಿನ ಪರವಾನಗಿ ನೀಡಲಿದೆ. ಮರಳು ಮಾಫಿಯಾದ ತಾಂಡವವಾಡುತ್ತಿರುವ ಇಂದಿನ ಸಂದರ್ಭದಲ್ಲಿ ಅದಕ್ಕೆ ಶಾಸ್ವತವಾಗಿ ಕೊನೆಗಾಣಿಸಲು ಮರಳು ನೀತಿಯಲ್ಲಿನ ತಿದ್ದುಪಡಿ ಅಗತ್ಯವಾಗಿದೆ ಎಂದರು.
ರಾಜ್ಯದಲ್ಲಿ ವಾರ್ಷಿಕವಾಗಿ 45ಲಕ್ಷ ಮೆಟ್ರಿಕ್ ಟನ್‌ನಷ್ಟು ಲಭ್ಯವಿದ್ದು, ಹಾಲಿ ಸುಮಾರು ಐದು ಲಕ್ಷ ಮೆಟ್ರಿಕ್ ಟನ್ ಕೊರತೆ ಎದುರಿಸುತ್ತಿದ್ದೇವೆ. ಈ ಕಾರಣಕ್ಕೆ ಎಂ ಸ್ಯಾಂಡ್ ಗೆ ಉತ್ಪಾದನೆ ಹೆಚ್ಚಿಸಲು ಸೂಚಿಸುವ ಅಗತ್ಯವಾಗಿದೆ ಎಂದು ಸಚಿವರು ವಿವರಿಸಿದರು.
ಮರಳು ಕೊರತೆ ನೀಗಿಸಲು ವಿವಿಧ ಎಂ ಸ್ಯಾಂಡ್ ಉತ್ಪಾದನಾ ಘಟಕಗಳಿಂದ 35ಲಕ್ಷ ಮೆಟ್ರಿಕ್ ಟನ್‌ನಷ್ಟು ಮರಳು ಪೂರೈಕೆ ಮಾಡಲಾಗುತ್ತಿದೆ. ವಿವಿಧ ನೈಸರ್ಗಿಕ ಮೂಲಗಳಿಂದ ರಾಜ್ಯದಲ್ಲಿ ಒಟ್ಟು ಸುಮಾರು ಐದು ಲಕ್ಷ ಮೆಟ್ರಿಕ್ ಟನ್ ಮರಳನ್ನು ಹೊರತೆಯಲಾಗುತ್ತಿದೆ. ಹೀಗಿದ್ದರೂ ಐದು ಲಕ್ಷ ಮೆಟ್ರಿಕ್ ಟನ್ ಮರಳಿನ ಕೊರತೆ ಸಮಸ್ಯೆ ಎದುರಾಗಿದ್ದರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.