ಬೆಂಗಳೂರು: ಇಡೀ ಬೆಂಗಳೂರಿಗೆ ಬೆಂಗಳೂರೇ ಈಗ ಹಬ್ಬದ ಮೂಡ್ ನಲ್ಲಿದೆ. ಹಾಗಂತ ಈ ವಾರಂತ್ಯದಲ್ಲಿ ಬಾಡೂಟ ಮಾಡಬಹುದು ಎಂದುಕೊಂಡಿದ್ದರೆ ಅಂತಹವರಿಗೆ ಶಾಕ್ ಸಿಕ್ಕಿದೆ.
ಇಂದು ಗೌರಿ ಹಬ್ಬವಿದ್ದು, ನಾಳೆ ಗಣೇಶನ ಹಬ್ಬವಿದೆ. ನಾಳೆ ಬೆಂಗಳೂರಿನಲ್ಲಿ ಗಣೇಶ ಹಬ್ಬದ ನಿಮಿತ್ತ ಮಟನ್, ಚಿಕನ್ ಸೇರಿದಂತೆ ಮಾಂಸ ಮಾರಾಟ ನಿಷೇಧ ಹೇರಲಾಗಿದೆ. ಕೇವಲ ಮಾಂಸಾಹಾರ ಮಾತ್ರವಲ್ಲ, ನಾಳೆ ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ.
ಸಾಮಾನ್ಯವಾಗಿ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಮದ್ಯ, ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗುತ್ತದೆ. ಅದರಂತೆ ಈಗ ಗಣೇಶ ಹಬ್ಬದ ನಿಮಿತ್ತ ಎಣ್ಣೆ, ಮಾಂಸಕ್ಕೆ ನಿಷೇಧ ಹೇರಲಾಗಿದೆ. ಗಣೇಶ ಚತುರ್ಥಿ ನಿಮಿತ್ತ ಮಾಂಸ ಮಾರಾಟ, ಪ್ರಾಣಿ ವಧೆಗೆ ನಿಷೇಧ ಹೇರಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 7 ರಂದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಅದೇ ರೀತಿ ಕಸಾಯಿಖಾನೆಗಳಲ್ಲಿ ಪ್ರಾಣಿ ವಧೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುವುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.