ಬೆಂಗಳೂರು: ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾ ವೈರಸ್ ಈಗ ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಹರಡುವ ಆತಂಕ ಎದುರಾಗಿದೆ. ಕೇರಳದಿಂದ ಬಂದವರಿಂದ ಬೆಂಗಳೂರಿನಲ್ಲಿ ನಿಫಾ ವೈರಸ್ ಹರಡುವ ಅಪಾಯ ಎದುರಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಓದುತ್ತಿರುವ ಕೇರಳ ಮೂಲದ ಕಾಲೇಜು ವಿದ್ಯಾರ್ಥಿ ತನ್ನ ಊರಿಗೆ ತೆರಳಿದ್ದಾಗ ನಿಫಾ ವೈರಸ್ ನಿಂದ ಮೃತಪಟ್ಟಿದ್ದ. ಈತನ ಸಂಪರ್ಕದಲ್ಲಿ ಹಲವು ಜನ ಬಂದಿರುವುದು ಖಚಿತವಾಗಿದೆ. ಹೀಗಾಗಿ ಈಗ ಬೆಂಗಳೂರಿನಲ್ಲೂ ನಿಫಾ ವೈರಸ್ ಹರಡುವ ಭೀತಿ ಎದುರಾಗಿದೆ.
ಕೇರಳದ ಯುವಕ ಸಾವನ್ನಪ್ಪಿದ್ದ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕಕ್ಕೂ ಎಚ್ಚರವಾಗಿರಲು ಸೂಚಿಸಿದೆ. ಮೃತನ ಸಂಪರ್ಕಕ್ಕೆ ಬಂದವರು ಇದೀಗ ಪರೀಕ್ಷೆಗೊಳಪಡಲಿದ್ದಾರೆ. ಸೆಪ್ಟೆಂಬರ್ 8 ರಂದು ಯುವಕನ ಅಂತ್ಯ ಸಂಸ್ಕಾರಕ್ಕೆ ಬೆಂಗಳೂರಿನ ಆತನ ಸ್ನೇಹಿತರು ತೆರಳಿದ್ದರು.
ಇವರೆಲ್ಲರಿಗೂ ಈಗ ನಿಫಾ ಭೀತಿ ಎದುರಾಗಿದೆ. ಎಲ್ಲರನ್ನೂ ಪರೀಕ್ಷೆಗೊಳಪಡಲು ಆರೋಗ್ಯ ಇಲಾಖೆ ಸೂಚಿಸಿದೆ. ಇದಲ್ಲದೇ ಕೇರಳದಿಂದ ಕರ್ನಾಟಕಕ್ಕೆ ಬರುವವರ ಮೇಲೂ ವಿಶೇಷ ನಿಗಾ ಇಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಜ್ವರ, ಕೆಮ್ಮು, ತಲೆನೋವು, ವಾಂತಿ ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಪರೀಕ್ಷಿಸಿಕೊಳ್ಳಲು ಸಲಹೆ ನೀಡಲಾಗಿದೆ.