Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಚಿಂತನೆ ಮೋದಿಯವರದು: ಶೋಭಾ ಕರಂದ್ಲಾಜೆ

Shobha karandlaje

Krishnaveni K

ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2024 (13:25 IST)
ಬೆಂಗಳೂರು: ನರೇಂದ್ರ ಮೋದಿಯವರು ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಮಾದರಿ ಜೀವನ ನಡೆಸಿದವರು. ನಮ್ಮೆಲ್ಲ ಕಾರ್ಯಕರ್ತರು ಮತ್ತು ಯುವಪೀಳಿಗೆಗೆ ಇದೇ ಸಂದೇಶವನ್ನು ಅವರು ನೀಡಿದ್ದಾರೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
 
ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಜೀ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಕಲೆ ಮತ್ತು ಸಾಂಸ್ಕ್ರತಿಕ ಪ್ರಕೋಷ್ಠ ವತಿಯಿಂದ ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಏರ್ಪಡಿಸಿದ ಚಿತ್ರಕಲಾ ಶಿಬಿರ ಮತ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಮೋದಿಜೀ ಅವರ ಜನ್ಮದಿನವನ್ನು ಮತ್ತು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಸೇವಾ ಚಟುವಟಿಕೆಯಲ್ಲಿ ನಮ್ಮ ಕಾರ್ಯಕರ್ತರು ತೊಡಗಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಚಿತ್ರಕಲಾ ಪ್ರದರ್ಶಿನಿಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಕ್ಕಾಗಿ ದುಡಿವ ಮಹನೀಯರನ್ನು ಸ್ಮರಿಸುವ ಕೆಲಸ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ ಸುಮಾರು 25 ವರ್ಷಗಳಿಂದ ಮೋದಿಯವರು ಕೆಲಸ ಮಾಡಿದ್ದಾರೆ. ಎಲ್ಲವನ್ನೂ ಅವರು ಬಡವರ ಸಲುವಾಗಿ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ವಿಶ್ವಕರ್ಮ ಯೋಜನೆಯಡಿ ಇದೇ 20ರಂದು ದೇಶದ 20 ಲಕ್ಷ ವಿಶ್ವಕರ್ಮರಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತದೆ. ಮಹಿಳೆಯರ ಘನತೆ ಹೆಚ್ಚಿಸಲು ಶೌಚಾಲಯ ನಿರ್ಮಾಣ, ಗ್ಯಾಸ್ ಸಿಲಿಂಡರ್‍ಗಳನ್ನು ನೀಡಲಾಗಿದೆ. ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ, ಮಹಿಳೆಯರು, ಯುವಕರಿಗಾಗಿ ಅನೇಕ ಯೋಜನೆಗಳನ್ನು ಮೋದಿಜೀ ಅವರು ಜಾರಿಗೊಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ರೈತರು, ಮಹಿಳೆಯರು, ಯುವಕರು, ಬಡವರು ಎಂಬ ನಾಲ್ಕು ಜಾತಿಗಳು ಮಾತ್ರ ಈ ದೇಶದಲ್ಲಿದೆ ಎಂಬ ಸಂದೇಶ ಪ್ರಧಾನಿ ಅವರದು. ಅವರೊಬ್ಬ ವಿಶ್ವನಾಯಕ. ದೇಶದ ಘನತೆಯನ್ನು ಅವರು ವಿಶ್ವದಾದ್ಯಂತ ಎತ್ತಿ ಹಿಡಿದಿದ್ದಾರೆ; ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
 
ಬಡವರನ್ನು ವ್ಯವಸ್ಥೆಯ ಜೊತೆ ಜೋಡಿಸಿದ ಕೀರ್ತಿ- ಸಿ.ಟಿ.ರವಿ
ಶಿಬಿರ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ಆಗಿರುವ ಬದಲಾವಣೆಗಳು ನಮ್ಮ ಅನುಭವಕ್ಕೆ ಬರುತ್ತಿವೆ. ಬಡವರನ್ನು ವ್ಯವಸ್ಥೆಯ ಜೊತೆ ಜೋಡಿಸಿದ ಕೀರ್ತಿ ಪ್ರಧಾನಮಂತ್ರಿಗಳದ್ದು ಎಂದು ತಿಳಿಸಿದರು.

ಇವತ್ತು ಮೋದಿಜೀ ಅವರ ಜನ್ಮದಿನ ಮಾತ್ರವಲ್ಲ ವಿಶ್ವಕರ್ಮ ಜಯಂತಿಯೂ ಆಗಿದೆ. ಕರ್ನಾಟಕದ ಪಾಲಿಗೆ ಹೈದರಾಬಾದ್ ನಿಜಾಮನ ಮತಾಂಧತೆಯಿಂದ ಕಲ್ಯಾಣ ಕರ್ನಾಟಕವನ್ನು ಮುಕ್ತಗೊಳಿಸಿದ ಸುದಿನವೂ ಇದಾಗಿದೆ. ದೇಶವೇ ಮೊದಲು ಎಂಬ ತತ್ವದೊಂದಿಗೆ ಮೋದಿಜೀ ನಿಂತರವಾಗಿ ಕೆಲಸ ಮಾಡಿದವರು ಎಂದು ವಿವರಿಸಿದರು.

ಮೋದಿಯವರ ಬದುಕೇ ಒಂದು ಸಂದೇಶ. ಹೇಗೆ ಗಾಂಧಿಯವರು ನನ್ನ ಜೀವನವೇ ನನ್ನ ಸಂದೇಶ ಎಂಬ ಮಾತನ್ನು ಹೇಳಿದ್ದರೋ, ನರೇಂದ್ರ ಮೋದಿಯವರ ಅನುದಿನದ ಬದುಕು ದೇಶಕ್ಕಾಗಿ ಮುಡಿಪಿಟ್ಟಿದ್ದಾರೆ ಎಂದು ವಿಶ್ಲೇಷಿಸಿದರು. ಬಡವರಿಗೆ ಶಕ್ತಿ ತುಂಬಲು ತಮ್ಮ ರಾಜಕೀಯ ಜೀವನವನ್ನು ಅವರು ಮುಡಿಪಾಗಿ ಇಟ್ಟಿದ್ದಾರೆ ಎಂದು ನುಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಅತಿಶಿ ಮಾರ್ಲೆನಾ ದೆಹಲಿ ನೂತನ ಮುಖ್ಯಮಂತ್ರಿ: ಅರವಿಂದ್ ಕೇಜ್ರಿವಾಲ್ ಆಪ್ತೆಗೆ ಪಟ್ಟ