ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಂದೂ ಕೂಡಾ ಮಳೆಯಾಗುವ ನಿರೀಕ್ಷೆಯಿದೆ.
ಮೆಜೆಸ್ಟಿಕ್, ಮಲ್ಲೇಶ್ವರಂ, ಕೆಆರ್ ಪುರಂ, ಹೆಬ್ಬಾಳ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು ರಸ್ತೆಗಳೂ ಜಲಾವೃತವಾಗಿದೆ. ಇದರಿಂದಾಗಿ ವಾಹನ ಸವಾರರೂ ಪರದಾಡುವಂತಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಮನೆಯಿಂದ ನೀರು ಹೊರಹಾಕುವುದೇ ಕೆಲಸವಾಗಿತ್ತು.
ಮೊನ್ನೆ ರಾತ್ರಿಯೂ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಆದರೆ ನಿನ್ನೆ ಮೊನ್ನೆಗಿಂತಲೂ ಅಧಿಕ ಮಳೆಯಾಗಿದೆ. ಕೊಟ್ಟಿಗೆಪಾಳ್ಯ, ಹಂಪಿನಗರ, ನಾಗಪುರ, ಮಾರುತಿಮಂದಿರ ಮುಂತಾದೆಡೆ ಭಾರೀ ಮಳೆಯಾಗಿದೆ. ಇಂದೂ ಕೂಡಾ ರಾತ್ರಿ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಇನ್ನೂ ಎರಡು ದಿನ ಮಳೆಯಾಗುವ ನಿರೀಕ್ಷೆಯಿದ್ದು, ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ.