ಬೆಂಗಳೂರು: ಜನರಿಗೆ ಉಚಿತ ಗ್ಯಾರಂಟಿಗಳನ್ನು ಕೊಟ್ಟೂ ನಿಮ್ಮ ಬಳಿ ಸಾಕಷ್ಟು ದುಡ್ಡಿದ್ದರೆ ಕೇಂದ್ರ ಹಣ ಕೊಟ್ಟಿಲ್ಲ ಎಂದು ಯಾಕೆ ಕೇಳ್ತೀರಿ ಹೀಗಂತ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಜನ ಪ್ರಶ್ನೆ ಮಾಡಿದ್ದಾರೆ.
ಕೇಂದ್ರದ ವಿರುದ್ಧ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಹೋರಾಟಕ್ಕೆ ಕರೆ ನೀಡಿರುವ ಸಿದ್ದರಾಮಯ್ಯ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿದ ಹೊರತಾಗಿಯೂ ನಾವು ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಜನ ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಬಳಿ ದುಡ್ಡಿದ್ದರೆ ಕೇಂದ್ರ ಕೊಟ್ಟಿಲ್ಲ ಎಂದು ಯಾಕೆ ದೂಷಿಸುತ್ತಿದ್ದೀರಿ. ಕೇಂದ್ರದಿಂದ ನೀಡುವ ಅಕ್ಕಿಯನ್ನು ನೀವು ಕೊಟ್ಟು ನಿಮ್ಮದೆಂದು ಹೇಳಿ ಕೊಳ್ತೀರಿ, ಪಿಎಂ ಜಲ್ ಯೋಜನೆಯಿಂದ ನೀರು ಕೊಟ್ಟು ನಮ್ಮ ಯೋಜನೆ ಅಂತೀರಿ, ಪಿಎಂ ಆವಾಸ್ ಯೋಜನೆಯಡಿ ಮನೆ ಕಟ್ಟಿಸಿಕೊಟ್ಟು ನಮ್ಮದೆಂದು ಹೇಳಿಕೊಳ್ತೀರಿ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.
ನಿಮ್ಮ ಗ್ಯಾರಂಟಿ ಯೋಜನೆಗೆ ನಾವು ಬೆಲೆ ತೆತ್ತಿದ್ದೇವೆ. ಗ್ಯಾರಂಟಿ ಯೋಜನೆಯಿಂದಾಗಿ ನಮಗೆ ಕರೆಂಟ್ ಬಿಲ್ ಹೆಚ್ಚಾಯ್ತು, ನೀರಿನ ಬಿಲ್ ಹೆಚ್ಚಾಯ್ತು, ಹಾಲು, ದಿನಸಿ ಎಲ್ಲವೂ ಏರಿಕೆಯಾಯ್ತು. ನಿಮ್ಮ ಗ್ಯಾರಂಟಿಯಿಂದಾಗಿ ನಮಗೆಲ್ಲಾ ಬೆಲೆ ಏರಿಕೆ ಗ್ಯಾರಂಟಿ ಸಿಕ್ಕಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.