ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಇಂದು, ನಾಳೆ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ, ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಇನ್ನೂ ಎರಡು ದಿನ ಇರಲಿದೆ. ಅದರಲ್ಲೂ ಅಕ್ಟೋಬರ್ 15 ಅಂದರೆ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಭಾರೀ ಮಳೆಯಾಗಿತ್ತು. ಕೇವಲ ಕರ್ನಾಟಕ ಮಾತ್ರವಲ್ಲ, ಕೇರಳ, ತಮಿಳುನಾಡಿನಲ್ಲೂ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಬೆಳಿಗ್ಗೆಯೇ ಮಳೆ ಬಳಿಕ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಇಂದೂ ಅದೇ ಪರಿಸ್ಥಿತಿ ಮುಂದುವರಿದಿದೆ.
ಮುಂದಿನ ಎರಡು ದಿನಗಳ ಕಾಲ ಮಳೆ ಇನ್ನಷ್ಟು ತೀವ್ರವಾಗಲಿದೆ. ಈಗಾಗಲೇ ಮಳೆಯಿಂದಾಗಿ ಸಾಕಷ್ಟು ಹಾನಿಗಳಾಗಿವೆ. ಭಾರೀ ಮಳೆ ಹಿನ್ನಲೆಯಲ್ಲಿ ಕರಾವಳಿಗರಿಗೆ ಸಮುದ್ರ ತೀರಕ್ಕೆ ತೆರಳದೇ ಇರಲು ಸೂಚನೆ ನೀಡಲಾಗಿದೆ. ಮುಂದಿನ ವಾರದಿಂದ ಮಳೆ ಅಬ್ಬರ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ.