ವಿಜಯಪುರ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕೆಐಡಿಬಿಐ ಆಸ್ತಿ ಮರಳಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನವರು ವಕ್ಫ್ ಆಸ್ತಿಯನ್ನೂ ಗುಳುಂ ಮಾಡಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಮಲ್ಲಿಕಾರ್ಜುನ ಖರ್ಗೆಯವರು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೇ ಹಿರಿಯ ನಾಯಕರಿದ್ದಾರೆ. ಆದರೆ ಅವರ ಮಾತುಗಳನ್ನು ಕೇಳಿದರೆ ಬಾಲಿಶ ಅನಿಸ್ತದೆ. ಬಿಜೆಪಿ ಭಯೋತ್ಪಾದಕರ ಪಕ್ಷ ಅಂತಾರೆ, ಹಾಗಿದ್ದರೆ ಕಾಂಗ್ರೆಸ್ ಏನು ಜಿಹಾದಿಗಳ ಪಕ್ಷವಾ ಎಂದು ಪ್ರಶ್ನೆ ಮಾಡಿದ್ದಾರೆ.
ಖರ್ಗೆ ಸಾಹೇಬ್ರು ತಪ್ಪು ಮಾಡಿಲ್ಲ ಅಂದರೆ ಭೂಮಿ ಯಾಕೆ ಹಿಂತಿರುಗಿಸಬೇಕಿತ್ತು? ಈಗ ನನ್ನ ಬಳಿ ಸ್ವಲ್ಪ ಆಸ್ತಿ ಇದೆ ಅಂತಂದ್ರೆ ಅದು ನಾನು ನ್ಯಾಯಯುತವಾಗಿ ಖರೀದಿ ಮಾಡಿದ್ದು ಎಂದರೆ ನಾನ್ಯಾಕೆ ವಾಪಸ್ ಮಾಡ್ತೀನಿ? ತಪ್ಪು ಮಾಡಿದ್ದಕ್ಕೇ ಈಗ ಸೈಟು ವಾಪಸ್ ಮಾಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಕೇವಲ, ಸರ್ಕಾರೀ ಭೂಮಿ ಮಾತ್ರವಲ್ಲ, ವಕ್ಫ್ ಬೋರ್ಡ್ ಆಸ್ತಿಯನ್ನೂ ಹಲವು ಕಾಂಗ್ರೆಸ್ ನಾಯಕರು ಗುಳುಂ ಮಾಡಿದ್ದಾರೆ. ಸಾವಿರಾರು ಎಕರೆ ವಕ್ಫ್ ಬೋರ್ಡ್ ಹೆಸರಿನಲ್ಲೂ ಕಾಂಗ್ರೆಸ್ ನಾಯಕರು ಭೂಕಬಳಿಕೆ ಮಾಡಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.