ಹೊಸ ಸಂಸತ್ ಭವನದ ಛಾವಣಿಯ ಮೇಲೆ ಸ್ಥಾಪಿಸಲಾಗಿದ್ದ ರಾಷ್ಟ್ರ ಲಾಂಛನ ಕುರಿತು ವಿಪಕ್ಷಗಳು ಅಪಸ್ವರ ಎತ್ತಿದ್ದು, ಮೋದಿ ಸರ್ಕಾರ ಲಾಂಛನ ವನ್ನು ವಿರೂಪ ಮಾಡಿದೆ ಎಂದು ಆರೋಪಿಸಿದೆ.
ಮೊದಲಿಗೆ ಪ್ರಧಾನಮಂತ್ರಿ, ಲೋಕಸಭೆಯ ರಚನೆಯನ್ನು ಅನಾವರಣ ಮಾಡುವ ಹಿಂದಿನ ಸಾಂವಿಧಾನಿಕ ಬದ್ಧತೆಯನ್ನು ಪ್ರಶ್ನೆ ಮಾಡಿದ್ದ ವಿರೋಧ ಪಕ್ಷಗಳುರಾಷ್ಟ್ರಲಾಂಛನವನ್ನು ಮೋದಿ ಸರ್ಕಾರ ವಿರೂಪ ಮಾಡಿದೆ ಎಂದು ಆರೋಪಿಸಿದೆ.
ಸಾರಾನಾಥದ ಅಶೋಕ ಸ್ತಂಭದ ಮೇಲಿರುವ ಸಿಂಹಗಳು ಸೌಮ್ಯ ಹಾಗೂ ವಿನಮ್ರವಾಗಿದ್ದವು, ಆದರೆ, ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರ ಲಾಂಛನದಲ್ಲಿನ ಸಿಂಹಗಳ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು, ಆಕ್ರಮಣಕಾರಿಯಾಗಿ ಘರ್ಜನೆ ಮಾಡುತ್ತಿರುವಂತಿದೆ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಟೀಕೆ ಮಾಡಿವೆ.
ಇದರ ಬೆನ್ನೆಲ್ಲೇ ಬಿಜೆಪಿ ಕೂಡ ವಿರೋಧ ಪಕ್ಷಗಳ ಟೀಕೆಗೆ ಅಷ್ಟೇ ಬಲಿಷ್ಠವಾಗಿ ಉತ್ತರ ನೀಡಿದೆ. ಸಂವಿಧಾನವನ್ನು ಮುರಿದ ವ್ಯಕ್ತಿಗಳಿಂದ ರಾಷ್ಟ್ರ ಲಾಂಛನದ ಬಗ್ಗೆ ಪಾಠ ಕೇಳುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ಸಾರನಾಥದಲ್ಲಿರುವ ಸಿಂಹಗಳು ಹಾಗೂ ಸಂಸತ್ ಭವನದ ಸಿಂಹಗಳ ನಡುವಿನ ವ್ಯತ್ಯಾಸಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಪ್ರಕಟಿಸಿದ್ದಾರೆ.
'ಇದು ದೃಷ್ಟಿಕೋನದ ಪ್ರಜ್ಞೆ. ನಮ್ಮ ಎದುರಿನ ಯಾವುದೇ ವಸ್ತುವಿನ ಸೌಂದರ್ಯ ಹೇಗಿರಲಿದೆ ಎನ್ನುವುದು ನಾವು ನೋಡುವ ಕಣ್ಣುಗಳಲ್ಲಿ ಇರುತ್ತದೆ. ಅದೇ ರೀತಿ ಶಾಂತ ಹಾಗೂ ಕೋಪವೂ ಕೂಡ ಹೌದು. ಸಾರಾನಾಥದ ಅಶೋಕ ಸ್ತಂಭದಲ್ಲಿರುವ ರಾಷ್ಟ್ರ ಲಾಂಛನ ಕೇವಲ 1.6 ಮೀಟರ್ ಎತ್ತರವಿದೆ. ಇನ್ನು ಹೊಸ ಸಂಸತ್ ಭವನದ ಮೇಲೆ ಇಡಲಾಗಿರುವ ರಾಷ್ಟ್ರ ಲಾಂಛನ ಬರೋಬ್ಬರಿ 6.5 ಮೀಟರ್ ಎತ್ತರವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.