ವಿಜಯಪುರ: ವಕ್ಫ್ ಬೋರ್ಡ್ ನಿಯಾಮಳಿಗೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮುಸ್ಲಿಂ ಮುಖಂಡರು ಕೆಲವರು ಸಿಡಿ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಿಡಿ, ಪೆನ್ ಡ್ರೈವ್ ವಿಚಾರಗಳು ಸಾಕಷ್ಟು ವಿವಾದ ಸೃಷ್ಟಿಸಿವೆ. ಇದೀಗ ಹಿಂದೂ ನಾಯಕ ಎಂದೇ ಬಿಂಬಿತವಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ವಿಜಯಪುರದಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಂ ಮುಖಂಡರು, ತಿಕ ಮುಚ್ಚಿಕೊಂಡು ನಿಮ್ಮದೆಷ್ಟಿದೆಯೋ ಅಷ್ಟು ನೋಡಿಕೊಂಡು ರಾಜಕಾರಣ ಮಾಡಿ. ನಮ್ಮ ವಕ್ಫ್ ಬೋರ್ಡ್ ತಂಟೆಗೆ ಬಂದರೆ ನವಂಬರ್ 6 ರಂದು ಸಿಡಿ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜಕಾರಣಿಗಳ ಪೈಕಿ ನೇರ ನುಡಿಯಿಂದ ಹೆಸರು ವಾಸಿಯಾಗಿರುವ ಬಸನಗೌಡ ಪಾಟೀಲ್ ಅವರ ಸಿಡಿಯೂ ಇದೆಯೇ ಎಂದು ಜನ ಅಚ್ಚರಿಪಟ್ಟುಕೊಳ್ಳುವಂತಾಗಿದೆ. ವಿಜಯಪುರ ತಾಲೂಕಿನ 2643 ಎಕರೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಎಂಟ್ರಿ ಮಾಡಲು ಸಚಿವ ಜಮೀರ್ ಅಹ್ಮದ್ ಸೂಚಿಸಿರುವುದಕ್ಕೆ ಯತ್ನಾಳ್ ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಜಮೀನಿನ ಪೈಕಿ ಕೆಲವು ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರೀ ಆಸ್ತಿಗಳೂ ಒಳಗೊಂಡಿವೆ. ಇದೇ ಕಾರಣಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ.