ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ವಿವಾಹ ಇಂದು ಬೆಂಗಳೂರಿನಲ್ಲಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬಂದಿದ್ದಾರೆ.
ಬಿಜೆಪಿ ಸಂಸದರಾಗಿರುವ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ವಿವಾಹವಾಗುತ್ತಿರುವ ಸುದ್ದಿ ಎರಡು ತಿಂಗಳ ಹಿಂದೆ ಬಹಿರಂಗವಾಗಿತ್ತು. ಅದಾದ ಬಳಿಕ ಇಬ್ಬರೂ ಜೊತೆಯಾಗಿರುವ ಫೋಟೋ, ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇಂದು ಬೆಂಗಳೂರಿನ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ ನಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿವಶ್ರೀ ಮೂಲತಃ ಚೆನ್ನೈಯವರಾಗಿದ್ದು, ಗಾಯಕಿ, ನೃತ್ಯಪಟು ಮತ್ತು ಆಯುರ್ವೇದ ವೈದ್ಯ ಪದವೀಧರೆ ಕೂಡಾ. ಸಾಕಷ್ಟು ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಇವರ ಮದುವೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ವಿ ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರ ದಂಡೇ ಆಗಮಿಸಿದೆ. ಜೊತೆಗೆ ಮಾಧ್ಯಮ ಕ್ಷೇತ್ರದ ಗಣ್ಯರೂ ಹಾಜರಾಗಿದ್ದರು.