ಮೈಸೂರು : ಅಂತರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಆಗಮಿಸುವ ಮೋದಿ ಅವರ ಕಾರ್ಯಕ್ರಮ ಪಟ್ಟಿ ಅಂತಿಮವಾಗಿದೆ.
ಜೂನ್ 20 ಮತ್ತು 21 ಎರಡು ದಿನ ಪ್ರಧಾನಿ ಮೋದಿ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹೌದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 20 ರಂದು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಸಂಜೆ 4.55 ಕ್ಕೆ ಮೈಸೂರು ತಲುಪಲಿದ್ದಾರೆ.
ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರು ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಯಿಂದ 6.15 ರವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಒಂದು ಕಾಲು ಗಂಟೆಯ ಸಂವಾದ ಮುಗಿಸಿ ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟದ ಪಾದದ ಬಳಿಯ ಶ್ರೀ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. 7.15 ರವರೆಗೆ ಪ್ರಧಾನಿಗಳು ಮಠದಲ್ಲಿ ಇರಲಿದ್ದಾರೆ.
ಮಠದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡಿ ತಾಯಿಯ ದರ್ಶನ ಪಡೆಯಲಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ರಾತ್ರಿ 7.30 ಕ್ಕೆ ಸರಿಯಾಗಿ ಆಗಮಿಸಲಿರುವ ಪ್ರಧಾನಿ, 15 ನಿಮಿಷ ಬೆಟ್ಟದಲ್ಲಿ ಇರಲಿದ್ದಾರೆ. ತಾಯಿ ದರ್ಶನ ಮುಗಿಸಿ ರಾಯ್ಡಿಸನ್ ಹೋಟೆಲ್ ಗೆ ಬಂದು ವಾಸ್ತವ್ಯ ಹೂಡಲಿದ್ದಾರೆ.