ಸತತ ಮಳೆಯಿಂದ ಜಲಾಶಯಗಳು ಭರ್ತಿಗೊಂಡು, ಕಾವೇರಿ ನದಿ ಪಾತ್ರದ ಜನರು ಸಂಕಷ್ಟದಲ್ಲಿದ್ದಾರೆ. ನೆರೆ ಪೀಡಿತ ಗ್ರಾಮದ ಜನರಿಗೆ ಗಡಿ ಜಿಲ್ಲೆಯಿಂದ ವರ್ತಕರ ಸಂಘದ ಸದಸ್ಯರು ಸಹಾಯ ಹಸ್ತ ಚಾಚಿದ್ದಾರೆ.
ಚಾಮರಾಜನಗರ ಪಟ್ಟಣದ ವರ್ತಕರ ಸಂಘದ ಸದಸ್ಯರು ಪ್ರವಾಹ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಭಾಗದ ಕಾವೇರಿ ನದಿ ತೀರದ ದಾಸನಪುರ, ಹಳೆ ಅಣಗಳ್ಳಿ, ಹಂಪಾಪುರ, ಹರಳೆ, ಮುಳ್ಳೂರು, ಯಡಕುರಿಯಾ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಹಳ್ಳಿಗಳು ಜಲಾವೃತಗೊಂಡಿವೆ. ಅಲ್ಲಿನ ಗ್ರಾಮಸ್ಥರು ಇದೀಗ ತೀವ್ರ ಸಂಕಷ್ಟದಲ್ಲಿದ್ದಾರೆ. ನೆರೆ ಪೀಡಿತರಿಗೆ ಕೊಳ್ಳೆಗಾಲ ಪಟ್ಟಣದಲ್ಲಿ ನಿರಾಶ್ರಿತ ಕೇಂದ್ರ ತೆರೆಯಲಾಗಿದೆ.
ದಾಸನಪುರ, ಹಳೆ ಅಣಗಳ್ಳಿ ಗ್ರಾಮದ ಸುಮಾರು ಏಳನೂರಕ್ಕೂ ಹೆಚ್ಚಿನ ಜನ ಕೊಳ್ಳೆಗಾಲದ ಮಹದೇಶ್ವರ ಕಾಲೇಜು ಬಳಿಯ ಬಾಲಕರ ವಸತಿ ನಿಲಯದ ನಿರಾಶ್ರಿತ ಕೇಂದ್ರಲ್ಲಿದ್ದಾರೆ. ನಿರಾಶ್ರಿತ ಜನರ ಬವಣೆ ನೀಗಿಸಲು ಚಾಮರಾಜನಗರ ಪಟ್ಟಣದ ವರ್ತಕರ ಸಂಘವೂ ಸಹಾಯ ಹಸ್ತ ಚಾಚಿದೆ.
ನಿರಾಶ್ರಿತರಿಗಾಗಿ ಬೆಡ್ ಶೀಟ್, ಚಾಪೆ, ನೀರಿನ ಬಾಟಲ್, ಪ್ರಾಥಮಿಕ ಔಷಧಿಗಳು ಸೇರಿದಂತೆ ಮೂರು ಟನ್ ಆಹಾರ ಪದಾರ್ಥವನ್ನ ಸಂಗ್ರಹಿಸಿ, ಕೊಳ್ಳೆಗಾಲ ಪಟ್ಟಣದ ನಿರಾಶ್ರಿತ ಕೇಂದ್ರಕ್ಕೆ ನೀಡಲಾಗಿದೆ. ಅತಿವೃಷ್ಟಿಯಿಂದ ನಮ್ಮ ಬಂಧುಗಳು ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ. ಅವರ ನೋವಿನ ಕಣ್ಣೀರು ಒರೆಸಲು ಮಾಡುತ್ತಿರುವ ಸಣ್ಣ ಪ್ರಯತ್ನವಿದು ಎನ್ನುತ್ತಾರೆ ಸ್ಥಳೀಯ ವರ್ತಕರು.