ಒಡಿಶಾ: ಬೆಂಗಳೂರಿನಲ್ಲಿ ನೇಪಾಳಿ ಮೂಲದ ತನ್ನ ಪ್ರೇಯಸಿ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ ಒಡಿಶಾದ ತನ್ನ ಸ್ವಗ್ರಾಮಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಹಂತ ಮುಕ್ತಿ ರಂಜನ್ ಪ್ರತಾಪ್ ರಾಯ್ ಡೆತ್ ನೋಟ್ ಬರೆದಿಟ್ಟ. ಆತನ ಡೆತ್ ನೋಟ್ ವಿವರ ಮತ್ತು ಕೊನೆಯ ಕ್ಷಣ ಏನು ಮಾಡಿದ್ದ ಎಂಬ ವಿವರ ಇಲ್ಲಿದೆ.
ಸೆ.3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ್ದ ಹಂತಕ ಬಳಿಕ ತನ್ನ ಹೆಬಗೋಡಿಯಲ್ಲಿರುವ ಮನೆಗೆ ತೆರಳಿದ್ದಲ್ಲದೆ, ಇಲ್ಲಿಯೇ ಇರುವ ಸಹೋದರನಿಗೆ ಕರೆ ಮಾಡಿ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿರಿಸಿರುವುದಾಗಿ ಹೇಳಿದ್ದ. ಬಳಿಕ ಆತನಿಗೂ ಊರು ಬಿಡುವಂತೆ ಹೇಳಿದ್ದರೂ ಆತ ಕೇಳಿಲ್ಲ.
ಮುಕ್ತಿ ರಂಜನ್ ತನ್ನ ಊರಿಗೆ ತೆರಳಿದ್ದು ಅಲ್ಲಿಗೆ ತಲುಪಿದ ಮೇಲೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿದೆ. ಮೊಬೈಲ್ ಬಳಸದೇ ಆತ ಓಡಾಡುತ್ತಿದ್ದ. ತುರ್ತು ಕೆಲಸದ ಮೇಲೆ ಮನೆಗೆ ಬಂದಿರುವುದಾಗಿ ಮನೆಯವರಿಗೆ ಹೇಳಿದ್ದ.
ಮೊನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದ್ದ ಹಂತಕ ಬೆಳಗ್ಗಿನ ಜಾವ ಕೆಲಸವಿದೆ ಎಂದು ಹೇಳಿ ತನ್ನ ಜೊತೆ ಮೊಬೈಲ್, ಲ್ಯಾಪ್ ಟಾಪ್ ಕೊಂಡೊಯ್ದು ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಈ ವೇಳೆ ಆತ ಡೆತ್ ನೋಟ್ ಬರೆದಿಟ್ಟಿದ್ದ.
ಡೆತ್ ನೋಟ್ ನಲ್ಲಿ ಏನಿದೆ?
ಹಂತಕ ಡೆತ್ ನೋಟ್ ನಲ್ಲಿ ತಾನು ಸೆಪ್ಟೆಂಬರ್ 3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವುದಾಗಿ ಬರೆದುಕೊಂಡಿದ್ದಾನೆ. ಮೊದಲು ಮಹಾಲಕ್ಷ್ಮಿ ತನ್ನ ಮೇಲೆ ಹಲ್ಲೆ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಸಾಯಿಸಿರುವುದಾಗಿ ಬರೆದಿದ್ದಾನೆ. ಮಹಾಲಕ್ಷ್ಮಿಯ ಇತ್ತೀಚೆಗಿನ ವರ್ತನೆಯಿಂದ ಬೇಸತ್ತಿದ್ದೆ. ಅದಕ್ಕೇ ಆಕೆಯನ್ನು ಕೊಲೆ ಮಾಡಿದ್ದೆ. ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ ನಲ್ಲಿರಿಸಿದ್ದೆ ಎಂದು ಬರೆದುಕೊಂಡಿದ್ದಾನೆ. ಸದ್ಯಕ್ಕೆ ರಾಜ್ಯ ಪೊಲೀಸ್ ತಂಡ ಆತನ ಗ್ರಾಮದಲ್ಲಿ ಮೃತನ ಫಿಂಗರ್ ಪ್ರಿಂಟ್, ಡೆತ್ ನೋಟ್ ಇತ್ಯಾದಿಗಳನ್ನು ಸ್ಥಳೀಯ ಪೊಲೀಸರಿಂದ ಪಡೆದು ಮರಳಲಿದ್ದಾರೆ.