ಒಡಿಶಾ: ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರ ಇಂದು ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ರತ್ನ ಭಂಡಾರ ತೆರೆದ ಸಂದರ್ಭದಲ್ಲಿ ಯಾರೆಲ್ಲಾ ಒಳಗೆ ಪ್ರವೇಶಿಸಿದರು ಎಂಬ ಮಾಹಿತಿ ಇಲ್ಲಿದೆ.
ಪುರಿ ಜಗನ್ನಾಥ ಮಂದಿರದಲ್ಲಿ ವಜ್ರ ವೈಢೂರ್ಯಗಳ ಭಂಡಾರವಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ತೆರೆಯುವುದಾಗಿ ಚುನಾವಣೆ ವೇಳೆ ಘೋಷಣೆ ಮಾಡಿತ್ತು. ಅದರಂತೆ ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇದೀಗ ಒಡಿಶಾದ ನೂತನ ಸರ್ಕಾರ ನೇಮಿಸಿರುವ ನೂತನ ಸಮಿತಿ ಸದಸ್ಯರು ಭಂಡಾರ ತೆರೆದು ಒಳಗೆ ಪ್ರವೇಶಿಸಿದ್ದಾರೆ.
ಇಂದು ಮಧ್ಯಾಹ್ನ 1.28 ಕ್ಕೆ ರತ್ನ ಭಂಡಾರ ತೆರೆಯಲಾಗಿದೆ. ಈ ವೇಳೆ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಬಿಸ್ವಂತ್ ರಥ್, ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ ಮುಖ್ಯಸ್ಥರು, ಒಡಿಶಾ ರಾಜಮನೆತನದ ಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಭಂಡಾರದ ಒಳಗೆ ಪ್ರವೇಶಿಸಿದ್ದಾರೆ.
ಇಂದು ಬೆಳಿಗ್ಗೆ ಈ ಸಂಬಂಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು. ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರದಲ್ಲಿ ಭಾರೀ ಪ್ರಮಾಣದಲ್ಲಿ ವಜ್ರ, ವೈಢೂರ್ಯಗಳ ಖಜಾನೆಯೇ ಇದೆ ಎನ್ನಲಾಗಿದೆ. ಇದನ್ನು ಕಾವಲು ಕಾಯಲು ಸರ್ಪಗಳಿವೆ ಎಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ನುರಿತ ಹಾವಾಡಿಗರನ್ನೂ ಸ್ಥಳಕ್ಕೆ ಕರೆಸಲಾಗಿದೆ. 46 ವರ್ಷಗಳ ಬಳಿಕ ರತ್ನ ಭಂಡಾರವನ್ನು ತೆರೆಯಲಾಗಿದೆ.