Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ..!

ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ..!
ಕೋಲಾರ , ಶನಿವಾರ, 7 ಆಗಸ್ಟ್ 2021 (09:24 IST)
ಕೋಲಾರ(ಆ.07): ತಮಿಳುನಾಡಿನ ಕಾಂಚಿಪುರಂನಿಂದ ಬೆಂಗಳೂರಿಗೆ ಮೊಬೈಲ್ ಸಾಗಿಸುತ್ತಿದ್ದ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 75ರ ಮುಳಬಾಗಿಲು ಸಮೀಪ ದೇವರಾಯ ಸಮುದ್ರ ಗೇಟ್ ಬಳಿ ತಡೆದು ಸುಮಾರು 6 ಕೋಟಿ ಬೆಲೆ ಬಾಳುವ ಎಂ.ಐ.ಮೊಬೈಲ್ಗಳನ್ನು 6 ಮಂದಿ ಇದ್ದ ದುಷ್ಕರ್ಮಿಗಳ ತಂಡ ದರೋಡೆ ನಡೆಸಿರುವ ಘಟನೆ ಗುರುವಾರ ತಡ ರಾತ್ರಿ ಸಂಭವಿಸಿದೆ.


ಲಾರಿಯಲ್ಲಿದ್ದ ಎಂ.ಐ.ಕಂಪನಿಗೆ ಸೇರಿದ ಮೊಬೈಲ್ಗಳನ್ನು ಸಂಪೂರ್ಣ ದೋಚಿರುವ ದರೋಡೆಕೋರರು ಮತ್ತೊಂದು ಲಾರಿಯಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಬೆಂಗಳೂರಿನ ಶ್ರೀಜಿ ಟ್ರಾನ್ಸ್ಪೋರ್ಟ್ನ ಒಂದು ಕಂಟೈನರ್ ಲಾರಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಕಾಂಚಿಪುರಂನಿಂದ ಸುಮಾರು 6.39 ಕೋಟಿ ರು.ಗಳ ಮೌಲ್ಯದ ಎಂಐ ಕಂಪನಿಯ ಮೊಬೈಲ್ಗಳನ್ನು ತುಂಬಿಕೊಂಡು ಸಾಗಿಸುತ್ತಿತ್ತು.
ಚಾಲಕನನ್ನು ಕಟ್ಟಿಹಾಕಿ ದರೋಡೆ
ಲಾರಿ ಮುಳಬಾಗಿಲು ತಾಲೂಕು ದೇವರಾಯಸಮುದ್ರ ಬಳಿ ಬರುತ್ತಿದ್ದಂತೆ ಕಾರ್ನಲ್ಲಿ ಬಂದ ಆರು ಮಂದಿಯ ತಂಡ ಲಾರಿಯನ್ನು ಅಡ್ಡಗಟ್ಟಿ ಜಗಳ ಶುರುಮಾಡಿದ್ದಾರೆ. ನಂತರ ಲಾರಿ ಚಾಲಕ ಸುರೇಶ್ನನ್ನು ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹೊಡೆದು ಕೈಕಾಲು ಕಟ್ಟಿಬಾಯಿಗೆ ಬಟ್ಟೆತುರುಕಿ ಅವನನ್ನು ಅಲ್ಲೇ ಬಿಟ್ಟು ಬಂದಿದ್ದಾರೆ. ಬಳಿಕ ಲಾರಿಯಲ್ಲಿದ್ದ ಮೊಬೈಲ್ಗಳನ್ನು ಇನ್ನೊಂದು ಲಾರಿಗೆ ತುಂಬಿಸಿಕೊಂಡು ಮೊಬೈಲ್ ಸಾಗಿಸುತ್ತಿದ್ದ ಲಾರಿಯನ್ನು ಅಲ್ಲಿಂದ ಸುಮಾರು ಎಂಟು ಕಿ.ಮೀ. ದೂರದ ಕೋಲಾರ ತಾಲೂಕು ನೆರ್ನಹಳ್ಳಿ ಬಳಿ ಬಿಟ್ಟು ಹೋಗಿದ್ದಾರೆ. ರಾತ್ರಿ ಇಡೀ ನಿರ್ಜನ ಪ್ರದೇಶದಲ್ಲಿ ಕಳೆದ ಚಾಲಕ ಸುರೇಶ್ ಬೆಳಿಗ್ಗೆ 9.30ರ ಸುಮಾರಿಗೆ ಹೆದ್ದಾರಿ ಬಳಿ ಬಂದು ಸ್ಥಳೀಯರ ಸಹಾಯ ಪಡೆದು ನಂತರ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಪೊಲೀಸರಿಂದ ಸ್ಥಳ ಪರಿಶೀಲನೆ
ದರೋಡೆ ನಡೆದಿರುವ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮುಳಬಾಗಿಲು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಚಾಲಕ ಸುರೇಶ್ನಿಂದ ಸಂಪೂರ್ಣ ಮಾಹಿತಿ ಪಡೆದು, ದರೋಡೆಕೋರರ ತಂಡದ ಮಾಹಿತಿ ಕಲೆಹಾಕುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಎಸ್ಪಿ ಕಿಶೋರ್ಬಾಬು ಹಾಗು ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದರು. ಇದೊಂದು ಪ್ರೀಪ್ಲಾನ್ ದರೋಡೆ ಎನ್ನಲಾಗಿದ್ದು ಚಾಲಕ ಸುರೇಶ್ ನೀಡಿರುವ ಕೆಲವೊಂದು ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ದರೋಡೆ ನಡೆದ ಸ್ಥಳದಲ್ಲಿ ಮೊಬೈಲ್ ಬಾಕ್ಸ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೊಬೈಲ್ಗಳಿದ್ದ ಒಂದೂ ಬಾಕ್ಸನ್ನೂ ಬಿಡದೆ ದುಷ್ಕರ್ಮಿಗಳು ದೋಚಿದ್ದಾರೆ. ಪ್ರತಿಷ್ಠಿತ ಮೊಬೈಲ್ ಕಂಪನಿಯ ಕೋಟ್ಯಂತರ ರುಪಾಯಿ ಮೌಲ್ಯದ ಮೊಬೈಲ್ಗಳು ಇಷ್ಟು ಸುಲಭವಾಗಿ ದರೋಡೆಕೋರರ ಪಾಲಾಗಿರುವ ಬಗ್ಗೆ ಹಲವು ಸಂಶಯಗಳನ್ನು ಮೂಡಿಸಿದೆ. ಇದರಲ್ಲಿ ಕಂಪನಿ ಒಳಗಿನವರದ್ದೇ ಕೈವಾಡ ಇರಬಹುದೆಂದು ಶಂಕಿಸಲಾಗಿದ್ದು ಶೀಘ್ರವೇ ಈ ದರೋಡೆಕೋರರು ಸಿಕ್ಕಿ ಬೀಳಲಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಜಾಹೀರಾತು ಬೋರ್ಡಲ್ಲಿ ಜನಪ್ರತಿನಿಧಿಗಳ ಫೋಟೋ ಬೇಡ!