Publish Date: Mon, 24 Apr 2023 (08:37 IST)
Updated Date: Mon, 24 Apr 2023 (10:39 IST)
ಬೀದರ್ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಸೋಮವಾರ ಮುಂಜಾನೆ ಶಾಕ್ ನೀಡಿದೆ. ವಿವಿಧ ಜಿಲ್ಲೆಗಳ ಹಲವು ಇಲಾಖೆಯ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದೆ.
ಬೀದರ್ ಜಿಲ್ಲೆಯಾದ್ಯಂತ 6 ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮುಡಬಿ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿಯವರ ಆನಂದ್ ನಗರ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಅವರು ಕಾರ್ಯನಿರ್ವಹಿಸುವ ಮುಡುಬಿಯ ಕಚೇರಿ ಹಾಗೂ ಬಸವಕಲ್ಯಾಣ ಪಟ್ಟಣದ ಹೊಂದಿರುವ ಗ್ಯಾರೇಜ್ ಮೇಲೂ ದಾಳಿ ಮಾಡಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ಸುರೇಶ್ ಮೇದಾ ಅವರ ಗುರುನಗರದ ನಿವಾಸ ಹಾಗೂ ನೌಬಾದ್ನಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಎ.ಆರ್ ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ ಓಲೇಕಾರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆದಿದೆ.