Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎ.ಪಿ.ಎಂ.ಸಿ ಬಳಿಯ ರಾಗಿ ಖರೀದಿ ಕೇಂದ್ರದಲ್ಲಿ ಮದ್ಯವರ್ತಿಗಳ ಕೈಚಳಕ

ಎ.ಪಿ.ಎಂ.ಸಿ ಬಳಿಯ ರಾಗಿ ಖರೀದಿ ಕೇಂದ್ರದಲ್ಲಿ ಮದ್ಯವರ್ತಿಗಳ ಕೈಚಳಕ
bangalore , ಭಾನುವಾರ, 5 ಜೂನ್ 2022 (21:13 IST)
ಪಟ್ಟಣದ ಎ.ಪಿ.ಎಂ.ಸಿ ಬಳಿಯ ರಾಗಿ ಖರೀದಿ ಕೇಂದ್ರದಲ್ಲಿ ಮದ್ಯವರ್ತಿಗಳ ಕೈಚಳಕ ಮುಂದಾಗಿದ್ದು ಸಾಮಾನ್ಯ ರೈತರು ತಾವು ಬೆಳೆದ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ..
ಪಟ್ಟಣದ ಎ.ಪಿ.ಎಂ.ಸಿ ಮತ್ತು ರಾಜ್ಯ ಉಗ್ರಾಣ ಕೇಂದ್ರದ ಆವರಣದಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ಮಾರಾಟ ಮಾಡಲು ತಂದಿರುವ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಸಕಾಲಕ್ಕೆ ಕೊಂಡುಕೊಳ್ಳುತ್ತಿಲ್ಲ ರಾಗಿ ತುಂಬಿಕೊಂಡು ಬಂದ ರೈತರ ಟ್ರ್ಯಾಕ್ಟರ್ ಗಳು ಖರೀದಿ ಕೇಂದ್ರದ ಆವರಣದಲ್ಲಿ ಎರಡು ಮೂರು ದಿನಗಳಿಂದ ಕಾಯುತ್ತಾ ನಿಂತಿವೆ ರಾಗಿ ಮಾರಾಟಕ್ಕೆ ಬಂದಿರುವ ಬಹುತೇಕ ರೈತರು ಬಾಡಿಗೆ ಟ್ರ್ಯಾಕ್ಟರ್ ಮಾಡಿಕೊಂಡು ರಾಗಿ ತಂದಿದ್ದಾರೆ. ಸಕಾಲಕ್ಕೆ ಖರಿದಿ ಕೇಂದ್ರದಲ್ಲಿ ರಾಗಿ ಕೊಳ್ಳದೆ ರೈತರು ಹೆಚ್ಚುವರಿ ಬಾಡಿಗೆಯನ್ನು ಟ್ರ್ಯಾಕ್ಟರ್ ಮಾಲೀಕರಿಗೆ ನೀಡಬೇಕಾಗಿದೆ.
ಎತ್ತಿನ ಗಾಡಿಗಳಿಂದ ತಂದ ರಾಗಿಯನ್ನು ಕೊಂಡುಕೊಳ್ಳಲು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ಮೊದಲ ಆದ್ಯತೆ ನೀಡಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ದಳ್ಳಾಳಿಗಳು ಹೊರಗಿನಿಂದ ಕಡಿಮೆ ಬೆಲೆಗೆ ಲಾರಿಗಳಲ್ಲಿ ತುಂಬಿಕೊಂಡು ಬಂದ ರಾಗಿ ಲಾರಿಗಳನ್ನು ಖರೀದಿ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸುತ್ತಾರೆ. ಅನಂತರ ಲಾರಿಯಲ್ಲಿದ್ದ ರಾಗಿ ಮೂಟೆಗಳನ್ನು ಎತ್ತಿನ ಗಾಡಿಗಳಲ್ಲಿ ತುಂಬಿಕೊಂಡು ಬಂದು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ವಿಷಯ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರೂ ಮದ್ಯವರ್ತಿಗಳೊಂದಿಗೆ ಶಾಮೀಲಾಗಿರುವುದರಿಂದ ರಾಗಿ ಬೆಳೆದ ನಿಜವಾದ ರೈತರು ತಮ್ಮ ರಾಗಿ ಮಾರಾಟಕ್ಕೆ ಹರಸಾಹಸ ಪಡಬೇಕಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಟ್ರ್ಯಾಕ್ಟರ್ ಗಳ ಮೂಲಕ ಖರೀದಿ ಕೇಂದ್ರಕ್ಕೆ ತಂದಿರುವ ರಾಗಿಯನ್ನು ನೆನೆಯದಂತೆ ಸಂರಕ್ಷಣೆ ಮಾಡಿಕೊಳ್ಳುವುದೂ ರೈತರಿಗೆ ಸಾಹಸದ ವಿಷಯವಾಗಿದೆ.
ರಾಗಿ ಬೆಳೆಗಾರರಿಗೆ ಅರಿವಿಲ್ಲದಂತೆ ದಳ್ಳಾಳಿಗಳು ರೈತರ ಪಹಣಿ ತಂದು ರಾಗಿ ಮಾರಾಟ ಮಾಡುತ್ತಿದ್ದಾರೆ. ಪಹಣಿದಾರ ರೈತರ ಖಾತೆಗೆ ರಾಗಿ ಮಾರಾಟದ ಹಣ ಬರುತ್ತಿದ್ದಂತೆ ಹಣ ಹಾಕಿದ ರೈತರ ಮನೆ ಬಾಗಿಲಿಗೆ ರೈತರ ಪರಿಚಿತರ ಮೂಲಕ ಹೋಗುವ ದಳ್ಳಾಳಿಗಳು ನಾನು ಮಾರಾಟಕ್ಕೆ ತಂದಿದ್ದ ರಾಗಿ ಒಂದಷ್ಟು ಹೆಚ್ಚಾದುದರಿಂದ ನಿಮ್ಮ ಹೆಸರಿಗೆ ಹಾಕಿ ಬಿಟ್ಟಿದ್ದೆ. ನಿಮ್ಮ ಖಾತೆಗೆ ಹಣ ಸಂದಾಯವಾಗಿದೆ. ದಯಮಾಡಿ ಸಂದಾಯವಾಗಿರುವ ಹಣವನ್ನು ನಿಮ್ಮ ಖಾತೆಯಿಂದ ತೆಗೆದುಕೊಡಿ ಎಂದು ರೈತರ ಮನವೊಲಿಸಿ ಹಣ ಪಡೆದು ಲಾಭ ಮಾಡಿಕೊಳ್ಳುತ್ತಿದ್ದಾರೆ.
ಖರೀದಿ ಕೇಂದ್ರದ ಅಧಿಕಾರಿಗಳು ಮತ್ತು ಮದ್ಯವರ್ತಿಗಳು ಪರಸ್ಪರ ಕೈಜೋಡಿಸಿ ನಿಜವಾದ ರಾಗಿ ಬೆಳೆಗಾರ ತನ್ನ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಲಾಗದ ಪರಿಸ್ಥಿಯನ್ನು ನಿರ್ಮಿಸಿದ್ದಾರೆ. ಖರೀದಿ ಕೇಂದ್ರಕ್ಕೆ ಬಂದ ರಾಗಿಯನ್ನು ಅಂದಂದೆ ಕೊಳ್ಳುವ ವ್ಯವಸ್ತೆಯನ್ನು ಎ.ಪಿ.ಎಂ.ಸಿ ಅಧಿಕಾರಿಗಳು ನಿರ್ಮಿಸಬೇಕು. ಖರೀದಿ ಕೇಂದ್ರದಲ್ಲಿ ರೈತರ ರಾಗಿ ಮಳೆಹಾನಿಗೊಳಗಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಅಧಿಕಾರಿಗಳು ಹೊತ್ತುಕೊಳ್ಳಬೇಕೆಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಟ್ರಾನಿಕ್ ವಾಹನಗಳ ಕಡೆ ಹೆಚ್ಚಿದ ಜನರ ಆಸಕ್ತಿ