ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಚೇತನರು ವಿಶಿಷ್ಟವಾಗಿ ಆಹ್ವಾನ ನೀಡುತ್ತಿದ್ದಾರೆ.
ಅಕ್ಷರ ಜಾತ್ರೆ ಹಿನ್ನೆಲೆಯಲ್ಲಿ ನುಡಿ ಜಾತ್ರೆಗೆ ಆಗಮಿಸುವಂತೆ ಕಲಬುರಗಿ ನಗರದ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಿಂದ ಕೆ.ಕೆ.ಆರ್.ಡಿ.ಬಿ. ಕಚೇರಿ ವರೆಗೆ ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಿದಲ್ಲದೆ ನುಡಿ ಹಬ್ಬಕ್ಕೆ ಬರುವಂತೆ ಕರೆ ನೀಡಿದರು.
ಕೈಯಲ್ಲಿ ಕಟ್ಟಿಗೆ, ಪರಸ್ಪರ ಕೈ ಹಿಡಿದು ಶಿಕ್ಷಕರ ಸಹಾಯದಿಂದ ಸಾಲಾಗಿ ಜಾಥಾದಲ್ಲಿ ಭಾಗವಹಿಸಿದ ಮಕ್ಕಳು “ನಮ್ಮೂರು ಕಲಬುರಗಿಗೆ ಬನ್ನಿ”, “ಕನ್ನಡ ತೇರು ಎಳೆಯೋಣ ಬನ್ನಿ” ಎಂದು ಕರೆ ನೀಡಿದ ಮಕ್ಕಳು, ಅಕ್ಷರ ಜಾತ್ರೆಗೆ ಆಹ್ವಾನ ನೀಡಿದರು.
ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾದ ಈ ಜಾಗೃತಿ ಜಾಥಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಿ.ಎಸ್.ಗುಣಾರಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಬನ್ಸಿ ಪವಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾದೇವಿ ಸೇರಿದಂತೆ ಮಹಿಳಾ ಸಮಿತಿಯ ಸದಸ್ಯರಿದ್ದರು.