ಪೊಲೀಸರು ಎಂದು ಹೇಳಿಕೊಂಡು ಶ್ರೀಮಂತರನ್ನೇ ಅಹಪರಿಸುತ್ತಿದ್ದ ಖತರ್ನಾಕ್ ಕಿಡ್ನ್ಯಾಪರ್ಸ್ ಕೊನೆಗೂ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವಸಂತ ಶಿವರೆಡ್ಡಿ ಎಂಬವರನ್ನು ಅಪಹರಿಸಿದ್ದ ಆರೋಪಿಗಳು, 50 ಲಕ್ಷ ರೂ. ವಸೂಲಿ ಮಾಡಿದ್ದರು. ವಸಂತ, ಶಿವರೆಡ್ಡಿಗೆ ಹೈದರಾಬಾದ್ಗೆ ಕಾರ್ಯನಿಮಿತ್ತ ಹೋಗಿದ್ದಾಗ ಅಲ್ಲಿನ ಹರೀಶ್ ಎಂಬಾತನ ಪರಿಚಯ ಆಗಿತ್ತು. ಜಮೀನು ವಿಚಾರವಾಗಿ ಇವರು ಆರೋಪಿಯನ್ನು ಪರಿಚಯ ಮಾಡಿಕೊಂಡಿದ್ದರು.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಹರೀಶ್, ಕಡಿಮೆ ದರದಲ್ಲಿ ಜಮೀನಿದೆ, ಅದರ ಬಗ್ಗೆ ಮಾತನಾಡಬೇಕು ಎಂಬುದಾಗಿ ಹೇಳಿ ವಸಂತ, ಶಿವರೆಡ್ಡಿ ಅವರನ್ನು ಕರೆಸಿಕೊಂಡಿದ್ದ. ದೇವನಹಳ್ಳಿ ಕಡೆಗೆ ಕರೆಸಿಕೊಂಡು, ನಂತರ ಹೈದರಾಬಾದ್ ಕಡೆಗೆ ಕರೆದೊಯ್ದು ಅಪಹರಣ ಮಾಡಿದ್ದರು.
ಅಪಹರಣದ ಬಳಿಕ ಶಿವರೆಡ್ಡಿಯನ್ನ ನಗ್ನಗೊಳಿಸಿ, ವಿಡಿಯೋ ಮಾಡಿ 50 ಲಕ್ಷ ರೂ. ಕೊಡುವಂತೆ ತಾಕೀತು ಮಾಡಿದ್ದರು. ಹಣ ತರುವಂತೆ ವಸಂತಳನ್ನ ಬೆಂಗಳೂರಿಗೆ ಕಳಿಸಿದ್ದರಿಂದ, ಆಕೆ ಸಾಲ ಮಾಡಿ ಹನ್ನೊಂದು ಲಕ್ಷ ರೂ. ಸಮೇತ ಹೈದರಾಬಾದ್ಗೆ ಹೋಗಿ ಆರೋಪಿಗಳಿಗೆ ನೀಡಿದ್ದಳು. ನಂತರ ಅವರು ಇಬ್ಬರನ್ನೂ ಬಿಟ್ಟು ಕಳಿಸಿದ್ದರು. ಈ ಸಂಬಂಧ ಅವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಹೈದರಾಬಾದ್ನ ಜುಬಿಲಿ ಹಿಲ್ಸ್ ಕ್ಲಬ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ ಪೊಲೀಸ್ ಎಂಬ ಕುರಿತು ನಕಲಿ ಐ.ಡಿ. ಕಾರ್ಡ್ಗಳು ಪತ್ತೆಯಾಗಿವೆ. ಆರೋಪಿಗಳಣು ಶಾಸಕ ಅಭ್ಯರ್ಥಿಯೊಬ್ಬರನ್ನೂ ಕಿಡ್ನಾಪ್ ಮಾಡಿದ್ದರೆನ್ನಲಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ