ಕೋಟಿ ಕುಬೇರ ಕೆಜಿಎಫ್ ಬಾಬು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಮಸೀದಿಗಳಿಗೆ ನೀಡಿದ್ದ ಹಣದ ಚೆಕ್‌ಗಳನ್ನು ವಾಪಸ್ ಪಡೆಯಲು ಕೆಜಿಎಫ್ ಬಾಬು ಮುಂದಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದ ಕೆಜಿಎಫ್ ಬಾಬು ಉರ್ದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುವ ಮೂಲಕ ಚೆಕ್‌ಗಳನ್ನು ವಾಪಸ್ ಕೇಳಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯುಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಸುಮಾರು 64 ಮಸೀದಿಗಳಿಗೆ 17.30 ಕೋಟಿ ರೂ. ಮೌಲ್ಯದ ಚೆಕ್‌ಗಳನ್ನು ನೀಡಿದ್ದರು. ಈಗ ಉರ್ದು ಪತ್ರಿಕೆಯಲ್ಲಿ ಜಾಹೀರಾತು ನೀಡಿರುವ ಕೆಜಿಎಫ್ ಬಾಬು ನಾನು ನೀಡಿರುವ ಹಣವನ್ನು ಮಸೀದಿಗಳು ಬಳಸಬಾರದು. ಅದು ಸ್ವೀಕರಾರ್ಹವಲ್ಲದ ಹಣ, ಆದಷ್ಟು ಬೇಗ ಚೆಕ್‌ಗಳನ್ನು ವಾಪಸ್ ಮಾಡಿ ಎಂದು ಸಮಿತಿಗಳಿಗೆ ಹೇಳಿದ್ದಾರೆ. ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್ ಹೊರಡಿಸಿರುವ ಫತ್ವಾ ಉಲ್ಲೇಖಿಸಿರುವ ಕೆಜಿಎಫ್ ಬಾಬು, ಚುನಾವಣಾ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಸ್ವೀಕರಾರ್ಹವಲ್ಲ ಎಂದಿದ್ದಾರೆ. ಸಿದ್ದಾಪುರದ ಟ್ಯಾಂಕ್ ಗಾರ್ಡನ್‌ನಲ್ಲಿರುವ ಮಸೀದಿ-ಇ-ಅತಿಕ್ ಹಾಗೂ ಕೃಷ್ಣಪ್ಪ ಗಾರ್ಡನ್‌ನಲ್ಲಿರುವ ಮಸೀದಿ-ಇ-ಹುಸ್ನಾ ಸೇರಿ ಹಲವು ಮಸೀದಿ ಸಮಿತಿಗಳಿಗೆ ನಾನು ಕೊಟ್ಟಿರುವ ಚೆಕ್‌ಗಳನ್ನು ವಾಪಸ್ ನೀಡಿ, ಅದನ್ನು ಬಳಸಬೇಡಿ ಎಂದು ಕೇಳಿದ್ದಾರೆ.