ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಇನ್ನೂ ನಾಲ್ಕು ದಿನದವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದು ಮುಂದಿನ ನಾಲ್ಕು ದಿನಗಳವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ನಿನ್ನೆ ಮಳೆಯಿಂದಾಗಿ ದಸರಾ ಹಬ್ಬದ ನಿಮಿತ್ತ ಊರಿಗೆ ಹೋಗಲು ರೆಡಿಯಾದವರು ಪರದಾಡುವಂತಾಯಿತು. ದ. ಕನ್ನಡದಂತಹ ಕರಾವಳಿ ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ನಿರಂತರ ಮಳೆಯಾಗುತ್ತಿದೆ. ಇಂದೂ ಮಳೆಯ ವಾತಾವರಣ ಮುಂದುವರಿದಿದೆ.
ಮುಂದಿನ ನಾಲ್ಕು ದಿನಗಳ ಕಾಲ, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಮನಗರ, ಕೋಲಾರ, ಚಿತ್ರದುರ್ಗ, ಹಾವೇರಿ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆಯಾಗಲಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 14 ರವರೆಗೆ ಮಳೆ ಮುಂದುವರಿಯಲಿದೆ.