ಮುಂಬೈ: ಉದ್ಯಮ ಜಗತ್ತಿನ ದಿಗ್ಗಜ ಮತ್ತು ಟಾಟಾ ಗ್ರೂಪ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಸರಳತೆಯ ಸಾಮ್ರಾಟ, ದೇಶ ಕಂಡ ಹೆಮ್ಮೆಯ ಉದ್ಯಮಿಯ ನಿಧನಕ್ಕೆ ಇಡೀ ವಿಶ್ವವೇ ಮರುಗಿತು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದರು. ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಗಣ್ಯರು ರತನ್ ಟಾಟಾ ಅವರ ಅಂತಿಮ ದರ್ಶನವನ್ನು ಪಡೆದರು.
ಗುರುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ವರ್ಲಿಯಲ್ಲಿರುವ ರುದ್ರಭೂಮಿಯಲ್ಲಿ ರತನ್ ಅವರ ಅಂತ್ಯಸಂಸ್ಕಾರಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಆದರೆ ಪಾರ್ಸಿ ಅವರ ಸಂಪ್ರದಾಯದ ಬದಲು, ರುದ್ರಭೂಮಿಯಲ್ಲಿ ದಹನ ಕ್ರಿಯೆ ಮೂಲಕ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಪಾರ್ಸಿ ಸಂಪ್ರದಾಯದಲ್ಲಿ ಹಿಂದೂಗಳು ಮತ್ತು ಮುಸ್ಲಿಂ ಸಂಪ್ರದಾಯದಂತೆ ಶವಸಂಸ್ಕಾರ ಮಾಡುವುದಿಲ್ಲ. ಇವರಲ್ಲಿ ಯಾರಾದರೂ ಮೃತಪಟ್ಟರೆ ದೋಖ್ಮೆನಾಶಿನಿ ಎಂದು ಕರೆಯಲಾಗುವ 'ಟವರ್ ಆಫ್ ಸೈಲೆನ್ಸ್' (ಮೌನ ಗೋಪುರ) ಎಂಬ ವಿಶಿಷ್ಟ ರೀತಿಯ ಅಂತ್ಯಕ್ರಿಯೆ ವಿಧಾನ ರೂಢಿಯಲ್ಲಿದೆ. ಇದರಲ್ಲಿ ದೇಹವನ್ನು ಹೂಳುವ ಅಥವಾ ಸುಡುವ ಪದ್ಧತಿ ಇಲ್ಲ. ಬದಲಾಗಿ, ಶವವನ್ನು ಟವರ್ ಆಫ್ ಸೈಲೆನ್ಸ್ ಮೇಲೆ ಇಡಲಾಗುತ್ತದೆ.
ಬೆಂಕಿ ಹಾಗೂ ಭೂಮಿ ಎರಡೂ ಪವಿತ್ರವಾದ ಕಾರಣ, ಪ್ರಕೃತಿ ಕಲುಷಿತಗೊಳ್ಳಬಾರದು ಎಂಬುದು ಪಾರ್ಸಿಗಳ ನಂಬಿಕೆ. ಹೀಗೇ ಟವರ್ ಮೇಲೆ ಇಟ್ಟ ದೇಹವನ್ನು ಪಕ್ಷಿಗಳು ತಿನ್ನುತ್ತವೆ. ಮೂಳೆಗಳು ಈ ಗೋಪುರದೊಳಗಿಂದ ಅಲ್ಲಿನ ಬಾವಿಯೊಳಗೆ ಬೀಳುತ್ತದೆ. ಇದು ವ್ಯಕ್ತಿಯೊಬ್ಬ ಮಾಡಬಹುದಾದ ಅಂತಿಮ ದಾನವಾಗಿದೆ ಎಂಬುದು ಪಾರ್ಸಿಗಳ ನಂಬಿಕೆ. ಆದರೆ ಇದೀಗ ರಣಹದ್ದುಗಳ ಸಂಖ್ಯೆ ಕಡಿಮೆಯಾದ ಕಾರಣ, ಪಾರ್ಸಿಯ ಅಂತ್ಯಕ್ರಿಯೆ ವಿಧಿ ವಿಧಾನದಲ್ಲೂ ಬದಲಾವಣೆಯಾಗಿದೆ.