Select Your Language

Notifications

webdunia
webdunia
webdunia
webdunia

ನಂದಿನಿ ಹಾಲಿನ ದರ ಹೆಚ್ಚಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ

BJP Protest

Krishnaveni K

ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2024 (16:19 IST)
ಬೆಂಗಳೂರು: ರಾಜ್ಯ ಸರ್ಕಾರವು ನಂದಿನಿ ಹಾಲಿನ ದರ ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ; ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ರಾಜ್ಯ ಬಿಜೆಪಿಯ ಹಾಲು ಪ್ರಕೋಷ್ಟದ ವತಿಯಿಂದ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಹಾಲು ಪ್ರಕೋಷ್ಟದ  ರಾಜ್ಯ ಸಂಚಾಲಕ ರಾಘವೆಂದ್ರ ಶೆಟ್ಟಿ ಅವರು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಿನ್ನೆ ಮಾಗಡಿಯಲ್ಲಿ ಸಹಕಾರ ಸಚಿವರಿಗೆ ಹಾಲಿನ ದರ ಏರಿಕೆ ಮಾಡುವಂತೆ ಸೂಚಿಸಿರುವುದು ಖಂಡನೀಯ. ಈಗಾಗಲೇ ರಾಜ್ಯದ ಜನತೆ ನೀರು, ವಿದ್ಯುತ್, ಮನೆ ಬಾಡಿಗೆ ಸೇರಿದಂತೆ ಅನೇಕ ದರ ಏರಿಕೆಯ ಆಘಾತದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದಿರುವ ಅವರು, ರಾಜ್ಯ ಸರ್ಕಾರವು ಮೊದಲು ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ನಂದಿನಿಯ ಎಲ್ಲ ಮಾದರಿಯ ಹಾಲಿನ ದರ ಕಳೆದ ಜೂನ್‍ನಲ್ಲೇ ಪ್ರತಿ ಲೀಟರ್‍ಗೆ 2 ರೂ 10 ಪೈಸೆಗೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಪ್ರತಿ ಲೀಟರ್ ಟೋನ್ಡ್ ಹಾಲು 42 ರಿಂದ 44 ಕ್ಕೆ, ಸಮೃದ್ಧಿ ಹಾಲು 51 ರಿಂದ 53, ಶುಭಂ ಹಾಲು 48 ರಿಂದ 50 ಹೀಗೆ ಎಲ್ಲ ಮಾದರಿಯ ಹಾಲಿನ ದರ ಏರಿಕೆ ಮಾಡಿದ್ದಾರೆ. ರಾಜ್ಯದ ಜನತೆ ನಮಗೆ 50 ಎಂ.ಎಲ್ ಹೆಚ್ಚಿಗೆ ಬೇಕೆಂದು ಯಾರು ಕೇಳಿರಲಿಲ್ಲ, ಆದರೂ ರಾಜ್ಯ ಸರ್ಕಾರ ಮೊಂಡುತನದಿಂದ, ಭಂಡತನದಿಂದ ನಾವು ನಂದಿನಿ ಹಾಲಿನ ದರ ಏರಿಕೆ ಮಾಡಿಲ್ಲ, 50 ಎಂ.ಎಲ್ ಹೆಚ್ಚಳ ನೀಡಿದ್ದೇವೆಂದು ರಾಜ್ಯದ ಹಾಗೂ ಬೆಂಗಳೂರು ನಗರದ ಜನತೆಗೆ ಮಕ್ಮಲ್ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
 
ರಾಜ್ಯದ ರೈತರ ಹೆಸರಿನಲ್ಲಿ, ರಾಜ್ಯದ ಜನತೆಯ ಮರ್ಜಿ ಕಾಯದೇ ಈಗ ಮತ್ತೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಲು ಸೂಚಿಸಿರುವುದು ಸರಿಯಲ್ಲ. ಈಗಾಗಲೇ ರಾಜ್ಯ ಸರ್ಕಾರ ಮತ್ತು ಕೆ.ಎಂ.ಎಫ್ ಹಾಲು ಉತ್ಪಾದಕರಿಗೆ ಸಬ್ಸಿಡಿಯ ಅಂದಾಜು 865 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಮಾಹಿತಿಯಿದೆ. ಮೊದಲು ತಾವು ರೈತರಿಗೆ ನೀಡಬೇಕಾದ ಹಾಲಿನ ಸಬ್ಸಿಡಿ ಪ್ರೋತ್ಸಾಹಧನ ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ರಾಜ್ಯ ಸರ್ಕಾರ ಹೇಗೆ ರೈತರಿಗೆ ಪಂಗನಾಮ ಹಾಕುತ್ತದೆಯೆಂದರೆ 100 ಲೀಟರ್ ಹಾಲನ್ನು ಹಾಲಿನ ಕೇಂದ್ರಗಳಿಗೆ ರೈತರು ನೀಡಿದರೆ ಅದರಲ್ಲಿ ಕೇವಲ 40 ಲೀಟರ್‍ಗೆ ಮಾತ್ರ ಪ್ರೋತ್ಸಾಹಧನ ನೀಡುತ್ತದೆ. ಇದರಲ್ಲಿ ಗುಡ್ ಮಿಲ್ಕ್, ಫ್ಯಾಟ್ ಮಿಲ್ಕ್ ಎಂದು ಹೇಳಿ ಇದರಲ್ಲಿ ಹಾಲಿನ ಗುಣಮಟ್ಟ ಕಡಿಮೆಯಿದೆ ಎಂದು ಹೇಳಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ, ನಾವು ಅಧಿಕಾರಕ್ಕೆ ಬಂದರೆ ಒಂದು ಲೀಟರ್ ಹಾಲಿನ ಸಬ್ಸಿಡಿ ಹಣವನ್ನು 7 ರೂಪಾಯಿಗೆ ಹೆಚ್ಚಿಸುತ್ತೇವೆಂದು ಹೇಳಿದ್ದರು. ಈಗ ಅಧಿಕಾರಕ್ಕೆ ಬಂದು 1 ವರ್ಷವಾದರೂ ಈ ಬಗ್ಗೆ ಗಮನ ಹರಿಸಿಲ್ಲ, ಸಂಪೂರ್ಣವಾಗಿ ಮರೆತು ಹೋಗಿದ್ದಾರೆ. ಮೊದಲು ಇದನ್ನು ನೆನಪು ಮಾಡಿಕೊಂಡು ಜಾರಿಗೊಳಿಸಲು ಮುಂದಾಗಬೇಕು.  ಗೋವಿನ ಆಹಾರವಾದ ಹಿಂಡಿ, ಬೂಸಾಗಳ ಬೆಲೆ ಗಗನಕ್ಕೇರಿದೆ. ಮೇವೂ ಸಹ ಸಿಗುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಹೈನುಗಾರಿಕೆ ನಷ್ಟದಲ್ಲಿದೆ, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಎಂದರೆ ಕಳ್ಳರ ಪಾರ್ಟಿ: ಪ್ರಲ್ಹಾದ್ ಜೋಶಿ