ಬೆಂಗಳೂರು : ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದೆ.
ಇತ್ತೀಚಿಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಮತ್ತು ಕೇಂದ್ರ ಸಚಿವ ಅಮಿತ್ ಶಾ ದೆಹಲಿಯಲ್ಲಿ ಸಭೆ ಸೇರಿ ಮೈತ್ರಿ ಸೂತ್ರ ಹೆಣೆದಿದ್ದಾರೆ. ಆದರೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಬಹುತೇಕ 24+4 ಸೀಟು ಹಂಚಿಕೆ ಸೂತ್ರವೇ ಫೈನಲ್ ಆಗುವ ಸಾಧ್ಯತೆಗಳಿವೆ. ಎಲ್ಲಾ ಸೂತ್ರಗಳಿಗೆ ಒಪ್ಪಿಗೆ ಸಿಕ್ಕಿದರೆ ಸೆಪ್ಟೆಂಬರ್ 10ಕ್ಕೆ ದೋಸ್ತಿ ಡೀಲ್ ಅಧಿಕೃತವಾಗಿ ಪ್ರಕಟವಾಗಬಹುದು ಎನ್ನಲಾಗಿದೆ.
ಇದಕ್ಕೆ ಪೂರಕವಾಗಿ ಸೆಪ್ಟೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಸಿದ್ಧತೆ ನಡೆಸಿದೆ. ಇವತ್ತು ಬೆಂಗಳೂರಲ್ಲಿ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ ಮೈತ್ರಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿಗೆ ಪ್ರಧಾನಿ ಮೋದಿ ಒಪ್ಪಿಗೆ ನೀಡಿದ್ದಾರೆ. ರಾಜ್ಯದಲ್ಲಿ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ ಎಂದಿದ್ದಾರೆ.