ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅದ್ಯಕ್ಷರ ಹುದ್ದೆಗೆ ಇಂದಿದ್ದ ಹೆಸರು ನಾಳೆಗೆ ಮತ್ತೆ ಬದಲಾಗುತ್ತಿದೆ. ಚುನಾವಣೆ ವೇಳೆ ಶಾಸಕರ ಆಯ್ಕೆ ವಿಚಾರದಲ್ಲಿ ಹೊಸ ಪ್ರಯೋಗ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲೂ ಅಚ್ಚರಿಯ ಮೂಡಿಸುತ್ತಾ ಅನ್ನೋ ಪ್ರಶ್ನೆಯೀಗ ಎಲ್ಲರನ್ನ ಕಾಡತೊಡಗಿದೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಅಯ್ಕೆ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೊಸ ಅಧ್ಯಕ್ಷರ ನೇಮಕ ವಿಚಾರದಲ್ಲಿ ಪಕ್ಷ ಯಾವುದೇ ಮಾಹಿತಿ ಹೊರ ಬಿಡದಿದ್ದರೂ, ಪಕ್ಷದ ಪಡಸಾಲೆಯಲ್ಲಿ ಹಲ ಬಗೆಯ ಮಾತುಗಳು ಕೇಳಿ ಬರುತ್ತಿವೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಾಜಿ ಸಚಿವ ಸಿ ಟಿ ರವಿ ಅವರನ್ನು ಕೆಳಗಿಳಿಸಿದ ತಕ್ಷಣವೇ ಅವರೇ ಬಿಜೆಪಿ ಮುಂದಿನ ರಾಜ್ಯಾಧ್ಯಕ್ಷರೆನ್ನುವ ಮಾತು ಪಕ್ಷದೊಳಗೆ ಕೇಳಿ ಬಂದಿತ್ತು. ಇತ್ತ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿ ಟಿ ರವಿ. ನಾನು ಹುದ್ದೆ ಆಕಾಂಕ್ಷಿಯಲ್ಲ ಆದರೆ ಪಕ್ಷ ಕೊಡುವ ಯಾವುದೇ ಜವಾಬ್ದಾರಿ ಆದ್ರೂ ಅದನ್ನು ನಿಭಾಯಿಸುವೆ ಎಂದು ಹೇಳಿದ್ರು. ಈ ಹಿನ್ನೆಲೆಯಲ್ಲಿ ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿತ್ತು.
ಈ ಬೆಳವಣಿಗೆ ನಡುವೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಕೇಳಿ ಬಂದಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಚುನಾವಣೆ ವೇಳೆ ಎರಡನೇ ಸ್ತರದ ನಾಯಕತ್ವ ಬೆಳೆಸಲು ಹೊಸ ಪ್ರಯೋಗಳಿಗೆ ಕೈ ಹಾಕಿದ್ದ ಬಿಜೆಪಿ, ಈಗ ರಾಜ್ಯಾಧ್ಯಕ್ಷರ ಹುದ್ದೆ ನೇಮಕದಲ್ಲೂ ಹೊಸತನಕ್ಕೆ ಮುನ್ನುಡಿ ಬರೆಯಲಿದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಿಜೆಪಿ ಮೂಲಗಳ ಪ್ರಕಾರ ಇಂತಹದ್ದೊಂದು ಸಾಧ್ಯತೆ ಇದ್ದು, ಈ ಬಾರಿ ಪಕ್ಷ ದಲಿತ ಸಮುದಾಯಕ್ಕೆ ಮನ್ನಣೆ ನೀಡಿ ಹೊಸ ಇತಿಹಾಸ ಬರೆಯಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೂ ರಾಜಕೀಯ ಲಾಭದ ಲೆಕ್ಕಾಚಾರದ ಮೇಲೆ ಪಕ್ಷ ಪ್ರಮುಖರನ್ನು ನೇಮಕ ಮಾಡುತ್ತಿದ್ದ ಬಿಜೆಪಿ ಈ ಬಾರಿ ಸಮುದಾಯ ಕೇಂದ್ರೀಕೃತ ಸ್ಥಾನ ಗೌರವ ನೀಡಲು ಚಿಂತನೆ ನಡೆಸಿದೆಯಂತೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಪ್ರಬಲ ಕೋಮುಗಳಾದ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಗೆ ಇಲ್ಲಿಯವರೆಗೆ ಪಕ್ಷ ಮುನ್ನಡೆಸಲು ಅವಕಾಶ ನೀಡಿದ್ದ ಕಮಲ ಪಕ್ಷ ಈ ಬಾರಿ ಕರ್ನಾಟಕದ ಮತ್ತೊಂದು ಬಲಿಷ್ಠ ಸಮುದಾಯವಾದ ದಲಿತ ಪಂಗಡದ ನಾಯಕನಿಗೆ ರಾಜ್ಯಾಧ್ಯಕ್ಷನ ಪಟ್ಟ ಕಟ್ಟಲು ಸಿದ್ದತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಪಕ್ಷದ ಹಾಗೂ ಆರ್ ಎಸ್ ಎಸ್ ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಯನ್ನು ನೂತನ ಸಾರಥಿಯನ್ನಾಗಿಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಪಕ್ಷದ ಈ ನಿರ್ಧಾರ ನಿಜವೇ ಆದರೆ ಬಿಜೆಪಿಯಲ್ಲಿರುವ ದಲಿತ ನಾಯಕರ ಪೈಕಿ ಅರವಿಂದ ಲಿಂಬಾವಳಿ ಹಾಗೂ ಗೋವಿಂದ ಕಾರಜೋಳ ಅವರುಗಳ ಹೆಸರು ರಾಜ್ಯಾಧ್ಯಕ್ಷರ ಹುದ್ದೆಗೆ ಪ್ರಮುಖವಾಗಲಿವೆ. ಇದರಲ್ಲೂ ಹೈ ಕಮಾಂಡ್ ಒಡನಾಟ, ವಸ್ತುಸ್ಥಿತಿ ನಿಭಾಯಿಸುವ ಬಿಜೆಪಿ ಅಂಜೆಂಡಾಗಳನ್ನು ಅಳುಕದೆ,ಚಾಬೂ ತಪ್ಪದೆ ಪಾಲಿಸುವ ಶಕ್ತಿಯ ಲೆಕ್ಕಾಚಾರದಲ್ಲಿ ನೋಡುವುದಾದರೆ ಈ ಇಬ್ಬರ ನಡುವೆ ಅರವಿಂದ ಲಿಂಬಾವಳಿ ಕೈ ಮೇಲಾಗಲಿದೆ. RSS ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಹಾಗೂ ರಾಷ್ಟ್ರೀಯ ಪ್ರಮುಖರರೊಂದಿಗೂ ಒಳ್ಳೇ ಒಡನಾಟ ಹೊಂದಿರುವ ಲಿಂಬಾವಳಿ ಪರ ಪಕ್ಷದ ಒಲವಿದೆ ಎನ್ನಲಾಗುತ್ತಿದೆ. ಸಿ ಟಿ ರವಿ ಆಯ್ಕೆ ವಿರೋಧಿಸುವ ಬಣವೂ ಲಿಂಬಾವಳಿ ಬೆನ್ನಿಗೆ ನಿಲ್ಲಲ್ಲಿದೆ. ಇದರ ಜೊತೆಗೆ ದಲಿತ ಸಮುದಾಯದೊಳಗಿರುವ ಸ್ಪೃಷ್ಯ ಸಮುದಾಯದ ವ್ಯಕ್ತಿಗೆ ನಾಯಕತ್ವ ನೀಡುವ ಮೂಲಕ ನಾನೂ ದಲಿತ ಪರ ಎನ್ನುವುದನ್ನ ಬಿಂಬಿಸಲು ಹೊರಟಿದೆ ಎನ್ನಲಾಗುತ್ತಿದೆ. ಆ ಮೂಲಕ ದಲಿತ ಬದ್ದತೆ ವಿಚಾರದಲ್ಲಿ ಕಾಂಗ್ರೆಸ್ ಗೆ ಪ್ರತಿಬಾರಿ ಸವಾಲು ಹಾಕುತ್ತಿದ್ದ ಬಿಜೆಪಿ ಈಗ ತನ್ನ ಪಾಲಿನ ಅವಕಾಶವನವನ್ನು ಆ ಸಮುದಾಯಕ್ಕೆ ನೀಡಲು ರೆಡಿಯಾಗುತ್ತಿದೆ ಎನ್ನುವುದು ಪಕ್ಷದೊಳಗಿನ ಆಂತರಿಕ ಮೂಲಗಳ ಮಾಹಿತಿ. ಇದಕ್ಕೆ ಬಿಜೆಪಿ ರಾಜ್ಯ ಎಸ್ ಸಿ ಮೋರ್ಚಾದ ಅಧ್ಯಕ್ಷರೂ ದನಿಗೂಡಿಸಿ ಸಮರ್ಥರಿಗೆ ಅವಕಾಶ ಸಿಗಲಿ ಎಂದಿದ್ದಾರೆ .