Select Your Language

Notifications

webdunia
webdunia
webdunia
webdunia

ಕಲಬುರಗಿ: ಜೈಲಿನಿಂದ ಪರಾರಿಯಾಗಿದ್ದ ಸಜಾ ಕೈದಿಗೆ ಪೋಲಿಸರ ಗುಂಡೇಟು, ಮತ್ತೊಮ್ಮೆ ಸೆರೆ

Kalaburagi jail
Photo Credit: X
ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಗೋಡೆ ಜಿಗಿದು ಭಾರಿ ಭದ್ರತಾ ಲೋಪವೆಸಗಿ ಪರಾರಿಯಾಗಿದ್ದ ಮೂವರು ಕೊಲೆ ಪ್ರಕರಣದ ಸಜಾ ಕೈದಿಗಳ ಪೈಕಿ ಓರ್ವನನ್ನು ಪೋಲಿಸರು ಇಂದು ಬೆಳಗಿನ ಜಾವ ಸಾಹಸಮಯ ಕಾರ್ಯಾಚರಣೆ ನಡೆಸಿ ಕಳಬಂಧನಕ್ಕೊಳಪಡಿಸಿದ್ದಾರೆ. ಬಂಧನದ ವೇಳೆ ದಾಳಿ ನಡೆಸಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
 
ಸಜಾ ಕೈದಿ ಸಂತೋಷ್‌ಗೆ ಗುಂಡೇಟು: ಪರಾರಿಯಾಗಿದ್ದ ಮೂವರು ಕೈದಿಗಳ ಪತ್ತೆಗೆ ಬಳ್ಳಾರಿ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಪೋಲಿಸರ ವಿಶೇಷ ಪಡೆಗಳನ್ನು ರಚಿಸಲಾಗಿತ್ತು. ಇಂದು ಬೆಳಗಿನ ಜಾವ ಕಾರ್ಯಾಚರಣೆ ವೇಳೆ ಔರಾದ್ ತಾಲೂಕಿನ ಸೈಂತಾಪುರ ಮೂಲದ ಕೊಲೆ ಶಿಕ್ಷೆಗೆ ಗುರಿಯಾಗಿದ್ದ ಸಂತೋಷ್ ಎಂಬಾತ ಸಿಕ್ಕಿಬಿದ್ದಿದ್ದಾನೆ.
 
ಇಬ್ಬರು ಪೊಲೀಸರಿಗೆ ಗಾಯ: ಪೊಲೀಸರು ಆರೋಪಿಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದಾಗ, ಆತ ಪೋಲಿಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರು ಪೋಲಿಸ್ ಸಿಬ್ಬಂದಿ ಗಾಯಗೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೋಲಿಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
 
ಉಳಿದ ಇಬ್ಬರಿಗಾಗಿ ಬಲೆ: ಜೈಲಿನಿಂದ ಪರಾರಿಯಾಗಿದ್ದ ಬೀದರ್ ಮೂಲದ ಮತ್ತಿಬ್ಬರು ಸಜಾ ಕೈದಿಗಳಾದ ಮಸ್ತಾನ್ ಮತ್ತು ಸಾಗರ್ ಅವರ ಪತ್ತೆಗಾಗಿ ನೆರೆ ರಾಜ್ಯಗಳ ಗಡಿ ಹಾಗೂ ನೆರೆಯ ಜಿಲ್ಲೆಗಳಲ್ಲಿ ಜಾಲ ಬೀಸಲಾಗಿದ್ದು, ತೀವ್ರ ಶೋಧ ಕಾರ್ಯ ಮುಂದುವರಿದಿದೆ.
 
ಮಂಗಳವಾರ ಬೆಳಗಿನ ಜಾವ ಜೈಲಿನ ಬ್ಯಾರಾಕ್ ಸಂಖ್ಯೆ 5ರಲ್ಲಿದ್ದ ಈ ಮೂವರು ಕೈದಿಗಳು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಏಣಿ ಹಾಗೂ ಹಾಸಿಗೆ-ಬಟ್ಟೆಗಳನ್ನು ಹಗ್ಗದಂತೆ ಬಳಸಿ ಅತ್ಯಂತ ಭದ್ರತೆಯ ಕಾಂಪೌಂಡ್ ಗೋಡೆ ಜಿಗಿದು ಪರಾರಿಯಾಗಿದ್ದರು. ಈ ಭಾರಿ ಭದ್ರತಾ ವೈಫಲ್ಯದ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಎಡಿಜಿಪಿ ಆಲೋಕ್ ಕುಮಾರ್ ಅವರು ಕಲಬುರಗಿ ಜೈಲು ಸೂಪರಿಂಟೆಂಡೆಂಟ್ ರಾಕೇಶ್ ಕಾಂಬ್ಳೆ ಸೇರಿದಂತೆ 8 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಈ ಜಿಲ್ಲೆಗಳಿಗೆ ಸಾಧಾರಣ ಮಳೆ ನಿರೀಕ್ಷೆ