ಬೆಂಗಳೂರು: ಮುಡಾ ಹಗರಣದ ಆರೋಪ ಕೇಳಿಬಂದು ತಮ್ಮ ಮೇಲೆ ಕೋರ್ಟ್ ತನಿಖೆಗೆ ಆದೇಶಿಸಿದ್ದರೂ ರಾಜೀನಾಮೆ ಕೊಡಲ್ಲ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯಗೆ ನಟ, ಸಂಸದ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ.
ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯಲ್ಲಿ ಭಾಗಿಯಾದ ಜಗ್ಗೇಶ್ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ್ದಾರೆ. ಈವತ್ತು ಎಷ್ಟೋ ಮಹನೀಯರು ತಪ್ಪು ಎಂದು ಸಾರಿದ ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದನ್ನು ನೋಡಿದ್ದೇವೆ. ಆದರೆ ಪ್ರಪ್ರಥಮ ಬಾರಿಗೆ ನಾನು ಚಾಲೆಂಜ್ ಮಾಡ್ತೀನಿ ಎನ್ನುವುದು ಸ್ಟಾರ್ಟ್ ಆಗಿದೆ.
ಯಾಕೆಂದರೆ ಇವರ ಸಂಗಡಿಗರೆಲ್ಲಾ ಒಂದಲ್ಲಾ ಒಂದು ಕೇಸ್ ನಲ್ಲಿ ತನಿಖೆಗೊಳಪಟ್ಟವರೇ. ಉದಾಹರಣೆಗೆ ದೆಹಲಿ ಸಿಎಂ ಕೇಜ್ರಿವಾಲ್ ನೋಡಿ. ಅವರು ಜೈಲ್ ಗೆ ಹೋದ್ರೂ ರಾಜೀನಾಮೆ ಕೊಡಲಿಲ್ಲ. ಜೈಲಿನೊಳಗೇ ಕೂತ್ಕೊಂಡು ಫೋನ್ ಮಾತಾಡ್ಕೊಂಡು ಮಾಡಿದ್ರು. ಬಹುಶಃ ಅವರು ಫೋನ್ ಮಾಡಿ ಹೇಳಿರಬೇಕು ಇವರಿಗೆ, ಸಿದ್ದರಾಮಯ್ಯನವರೇ ಹೆದರ್ಕೋಬೇಡಿ. ಕೇಸ್ ಬಂದ್ರೂ ಬರಲಿ, ಜೈಲಲ್ಲೇ ಕೂತ್ಕೊಂಡು ವ್ಯಾಪಾರ ಮಾಡಬಹುದು. ಅಷ್ಟು ಸ್ವಚ್ಛಂದವಾಗಿದೆ ಇವತ್ತಿನ ರಾಜಕಾರಣ ಎಂದು ಕಿವಿ ಮಾತು ಹೇಳಿರಬಹುದು.
ಸಿದ್ದರಾಮಯ್ಯನವರೇ ಸುಮಾರು 40 ವರ್ಷಗಳ ರಾಜಕಾರಣದಲ್ಲಿ ನಿಮ್ಮ ಬಿಳಿ ಬಟ್ಟೆಯ ಮೇಲೆ ಒಂದೇ ಒಂದು ಕಪ್ಪು ಕಲೆಯಿರಲಿಲ್ಲ. ಆದರೆ ಈಗ ಇಡೀ ಬಟ್ಟೆಯೆಲ್ಲಾ ಕಪ್ಪಾಗಿದೆ. ಹೀಗಾಗಿ ನಾನು ಮನವಿ ಮಾಡುತ್ತೇನೆ, ರಾಜೀನಾಮೆ ಕೊಡಿ, ಈಚೆ ಬಂದು ಪ್ರೂವ್ ಮಾಡಿ. ಇಲ್ಲ ಅಂದ್ರೆ ರಾಜ್ಯದ ಯಾವುದೇ ಮೂಲೆಗೆ ಹೋದರೆ ನಿಮಗೆ ಅಪಮಾನ ಮಾಡ್ತಾರೆ. ಆ ಶಿಕ್ಷೆ ನಿಮಗೆ ಬೇಡ ಎಂಬುದು ನಮ್ಮ ವಿನಂತಿ.
ಅವರ ಅಕ್ಕ-ಪಕ್ಕದಲ್ಲಿರೋ ಎಂಎಲ್ಎಗಳೇ ಹಾಕಿಕೊಟ್ಟವ್ರೆ. ನೀವು ರಾಜೀನಾಮೆ ಕೊಟ್ರೆ 50-60 ಜನ ಶಾಸಕರನ್ನು ಕರ್ಕೊಂಡು ಹೋಗ್ತಾರೆ, ಬಿಜೆಪಿಯವರು ಸರ್ಕಾರ ಮಾಡ್ತಾರೆ ಅಂತ ಹೇಳಿಬಿಟ್ರು. ನಾವು ಮಾಡಲ್ಲ ಗೊತ್ತು. ಆದ್ರೂ ಅವರು ಹಂಗೇ ಅಂದ್ಕೊಂಡುಬಿಟ್ಟಿದ್ದಾರೆ ಎಂದು ಜಗ್ಗೇಶ್ ವ್ಯಂಗ್ಯ ಮಾಡಿದ್ದಾರೆ.