ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ಆದೇಶಿಸಿದರೂ ತಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ತನಿಖೆಗೆ ಆದೇಶಿಸುತ್ತಿದ್ದಂತೇ ಬಿಜೆಪಿ ರಾಜೀನಾಮೆಗೆ ಒತ್ತಡ ಹೇರಿ ಪ್ರತಿಭಟನೆ ನಡೆಸುತ್ತಿದೆ. ತಮ್ಮ ವಿರುದ್ಧ ತನಿಖೆಗೆ ಆದೇಶಿಸುತ್ತಿದ್ದಂತೇ ಸಿದ್ದರಾಮಯ್ಯ ನಾನು ರಾಜೀನಾಮೆ ಕೊಡಲ್ಲ, ಬಿಜೆಪಿ-ಜೆಡಿಎಸ್ ಒತ್ತಡಕ್ಕೆ ಮಣಿಯಲ್ಲ ಎಂದಿದ್ದರು.
ಇಂದೂ ಬಿಜೆಪಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಮತ್ತೆ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯನವರನ್ನು ರಾಜೀನಾಮೆ ಕೊಡ್ತೀರಾ ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಿರುವ ಸಿಎಂ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ನಾನು ಏನೂ ತಪ್ಪು ಮಾಡಿಲ್ಲ. ನಾನು ಯಾಕೆ ರಾಜೀನಾಮೆ ಕೊಡಲಿ ಎಂದು ಸಿದ್ದು ಪುನರುಚ್ಚರಿಸಿದ್ದಾರೆ.
ಮೊದಲು ಕುಮಾರಸ್ವಾಮಿಯವರು ರಾಜೀನಾಮೆ ಕೊಡ್ಲಿ. ಅವರ ಮೇಲೂ ಆಪಾದನೆಗಳಿಲ್ವಾ? ಅವರು ಎಲ್ಲಿ ಸಚಿವರಾಗಿರೋದು? ಯಾರು ಪ್ರಧಾನ ಮಂತ್ರಿ? ಯಾರ ಪಕ್ಷ ಅಧಿಕಾರದಲ್ಲಿರೋದು? ಮೊದಲು ಅವರು ರಾಜೀನಾಮೆ ಕೊಡಲಿ. ನಾನು ಏನೂ ತಪ್ಪು ಮಾಡಿಲ್ಲ. ನಾನ್ಯಾಕೆ ಕೊಡಲಿ ರಾಜೀನಾಮೆಯಾ? ಈ ಹಿಂದೆ ಮೋದಿ ರಾಜೀನಾಮೆ ಕೊಟ್ಟಿದ್ರಾ? ಅವರು ಮುಖ್ಯಮಂತ್ರಿಯಾಗಿದ್ದಾಗ ನೂರಾರು ಜನ ಸಾವನ್ನಪ್ಪಿದ್ದರು. ಆಗಲೂ ರಾಜೀನಾಮೆ ಕೊಟ್ಟಿಲ್ಲ. ಈಗ ನಾನು ಯಾಕೆ ಕೊಡಲಿ ಎಂದು ಸಿದ್ದು ಗರಂ ಆಗಿ ಹೇಳಿದ್ದಾರೆ.