ಅದು ಪಟವರ್ಧನ ಮಹಾರಾಜನ ಕಾಲದಿಂದಲೂ ಇರುವ ರಸ್ತೆ. ಮುಖ್ಯರಸ್ತೆಯೂ ಹೌದು. ಆದರೆ ಪ್ರತಿ ಬಾರಿ ಮಳೆ ಬಂದಾಗ ಆ ರಸ್ತೆ ಮಾತ್ರ ಕೆಸರಿನ ಗದ್ದೆಯಾಗುತ್ತದೆ. ಹೀಗಾಗಿ ಸವಾರರು, ಜನರು ಪ್ರಯಾಸ ಪಟ್ಟು ಆಡಳಿತ ವರ್ಗದ ವರ್ಗಕ್ಕೆ ಛೀಮಾರಿ ಹಾಕುತ್ತ ಅನಿವಾರ್ಯವಾಗಿ ಸಂಚರಿಸುವಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸಾವಳಗಿ ಪಟ್ಟಣಕ್ಕೆ ಸಂಪರ್ಕ ಸಾಧಿಸುವ ಜಿಲ್ಲಾ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಟ ಮಾಡುತ್ತವೆ. ಪಟವರ್ಧನ ಮಹಾರಾಜರ ಕಾಲದಿಂದಲೂ ಜಮಖಂಡಿ- ಜತ್ತ ಮುಖ್ಯ ರಸ್ತೆಯಾಗಿದೆ. ಜಂಬಗಿ ಬ್ರಿಡ್ಜ್ ನಿಂದ ಜಮಖಂಡಿ ವರೆಗೆ ವ್ಯವಸ್ತಿತ ರಸ್ತೆಯಾಗಿದೆ.
ಜಂಬಗಿ ಬ್ರಿಡ್ಜ್ ನಿಂದ ಸಾವಳಗಿ ಮಾರ್ಗದ 6 ಕಿ. ಮಿ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿ ಗುಂಡಿಗಳಿದ್ದು ಮಳೆಗಾಲದಲ್ಲಿ ಕೆಸರುಮಯವಾಗುತ್ತವೆ. ಬೇಸಿಗೆಯಲ್ಲಿ ಉಸಿರಾಟವೂ ಆಗದಂತ ಧೂಳುಮಯವಾಗಿ ಇಲ್ಲಿನ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ. ಇತ್ತ ಯಾವುದೇ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಗಮನ ಹರಿಸದೇ ಇರುವುದು ವಿಪರ್ಯಾಸವಾಗಿದೆ.