ಬೆಂಗಳೂರು: ಕರ್ನಾಟಕದ ಹೆಮ್ಮೆಯ ಐಪಿಎಸ್ ಅಧಿಕಾರಿ ಎಂದೇ ಗುರುತಿಸಲ್ಪಡುವ ಡಿ ರೂಪ ಈಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ. ಅದಕ್ಕೆ ಕಾರಣ ದೀಪಾವಳಿಗೆ ಪಟಾಕಿ ನಿಷೇಧಿಸಿರುವ ಕುರಿತು ನಡೆದ ಟ್ವಿಟರ್ ವಾರ್.
ಪಟಾಕಿ ನಿಷೇಧ ಹಿಂದೂಗಳಿಗೆ ಮಾಡುವ ಅನ್ಯಾಯ ಎನ್ನುವವರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಹಿಂದೂ ಸಂಸ್ಕೃತಿಯಲ್ಲಿ ಪಟಾಕಿ ಎಂಬುದೇ ಇರಲಿಲ್ಲ. ಇದು ಐರೋಪ್ಯ ದೇಶಗಳಿಂದ ಬಂದ ಸಂಸ್ಕೃತಿ. ನಮ್ಮ ವೇದ, ಪುರಾಣಗಳಲ್ಲಿ ಪಟಾಕಿ ಹೊಡೆಯುವ ಬಗ್ಗೆ ಎಲ್ಲಾದರೂ ಉಲ್ಲೇಖವಿತ್ತೇ ಎಂದು ಪ್ರಶ್ನಿಸಿದ್ದರು. ಡಿ ರೂಪ ಅವರ ಟ್ವೀಟ್ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಅದರಲ್ಲೂ ಟ್ರೂ ಐಡಿಯಾಲಜಿ ಎಂಬ ಟ್ವಿಟರ್ ಖಾತೆ ರೂಪರನ್ನು ಕಟುವಾಗಿ ಪ್ರಶ್ನಿಸಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಟ್ರೂ ಐಡಿಯಾಲಜಿ ಟ್ವಿಟರ್ ಖಾತೆ ಅಮಾನತಾಗಿದೆ. ಇದರ ಬಗ್ಗೆ ಇದೀಗ ಟ್ವಿಟರ್ ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ರೂಪ ತಮ್ಮ ಪ್ರಭಾವ ಬಳಸಿ ಸಾಮಾಜಿಕ ಜಾಲತಾಣ ಅಮಾನತುಗೊಳಿಸುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ.