ದೇಶಾದ್ಯಂತ ಭಾರಿ ಸುದ್ದಿ ಮಾಡಿದ್ದ ಯಶ್ ನಟನೆಯ ಕೆಜಿಎಫ್ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುನ್ನತ ಕನ್ನಡ ಜನಪ್ರಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಕನ್ನಡ ಜನಪ್ರಿಯ ವಿಭಾಗದಲ್ಲಿ ಪ್ರಥಮಗಳ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 12ನೇ ಅವತರಣಿಕೆಯ ಸಮಾರೋಪ ಸಮಾರಂಭದಲ್ಲಿ ಕಲಾತ್ಮಕ ನಿರ್ದೇಶಕ ಎಂ.ವಿದ್ಯಾ ಶಂಕರ್ ಅವರು ಪ್ರಶಸ್ತಿಗಳನ್ನು ಪ್ರಕಟಿಸಿದರು.
ಏಷಿಯಾದ ಸಿನಿಮಾ ಸ್ಪರ್ಧೆಯಲ್ಲಿ ಕಳೆದ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾವೊಂದು ಆಯ್ಕೆಯಾಗಿದೆ. ವಸಂತ್ ನಿರ್ದೇಶನದ ತಮಿಳು ಚಿತ್ರ ' ಶಿವರಂಜಿನಿ ಇನ್ನುಂ ಸಿಲಾ ಪೆಂಗುಲಮ್ ' ಈ ಪ್ರಶಸ್ತಿಗೆ ಭಾಜನವಾಗಿದೆ. ಇದು 10 ಸಾವಿರ ಡಾಲರ್ ಮೊತ್ತವನ್ನು ಒಳಗೊಂಡಿದೆ .
ಉಳಿದಂತೆ ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಗೆ ದ್ವಿತೀಯ ಹಾಗೂ ಸೂರಿ ನಿರ್ದೇಶನದ 'ಟಗರು' ಚಿತ್ರ ಮೂರನೇ ಪ್ರಶಸ್ತಿ ಗಳಿಸಿವೆ.
ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ಪಿ. ಶೇಷಾದ್ರಿ ನಿರ್ದೇಶನದ 50 ವರ್ಷಗಳ ಹಿಂದಿನ 'ಮೂಕಜ್ಜಿಯ ಕನಸುಗಳು' , ವಿಶಾಲ್ ರಾಜ್ ಅವರ ನಿರ್ದೇಶನದ ' ಸಾವಿತ್ರೀ ಭಾಯಿ ಪುಲೆ' ಹಾಗೂ ಕೆ.ಶಿವರುದ್ರಯ್ಯ ನಿರ್ದೇಶನದ 'ರಾಮನ ಸವಾರಿ' ಚಿತ್ರಗಳಿಗೆ ತಲಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಲಭಿಸಿದೆ.
ಅನಮಿಕ ಹಕ್ಸರ್ ನಿರ್ದೆಶನದ 'ಗೋಡೆ ಕೋ ಜಿಲೇಬಿ ಕಿಲಾನೇ ಲೇ ಜಾ ರಿಯಾ ಹೂಂ' ಚಿತ್ರಕ್ಕೆ ಚಿತ್ರಭಾರತಿ ಭಾರತೀಯ ಸಿನಿಮಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರ ಆಯ್ಕೆ ವಿಭಾಗದಲ್ಲಿ ಕೂಡ ಪ್ರಥಮ ಪ್ರಶಸ್ತಿ ಗಳಿಸಿದೆ. ಇದು 3 ಲಕ್ಷ ರೂ. ನಗದನ್ನು ಒಳಗೊಂಡಿದೆ.
ಅನೂಪ್ ಮನ್ನ ನಿರ್ದೇಶನದ ಒಡಿಸ್ಸಿ ಚಿತ್ರ 'ಆಮ್ರಿತ್ಯು ' ಜ್ಯೂರಿಯ ವಿಶೇಷ ಪ್ರಶಸ್ತಿ ಪಡೆದುಕೊಂಡಿದೆ.
ನೆಟ್ ಪ್ಯಾಟ್ ಅಂತಾರಾಷ್ಟ್ರೀಯ ಜ್ಯೂರಿ ಪ್ರಶಸ್ತಿಗೆ ಮನ್ಸೋರೆ ನಿರ್ದೇಶನದ 'ನಾತಿಚರಾಮಿ' ಭಾಜನವಾಗಿದೆ.