ವಿಜಯಪುರ : ಆರ್ ಎಸ್ ಎಸ್ ಶಾಖೆಯಿಂದ ತಮಗೆ ಕಲಿಯುವುದು ಏನೂ ಇಲ್ಲ, ಆರ್ ಎಸ್ ಎಸ್ ನಿಂದ ತರಬೇತಿ ಪಡೆದು ಬಂದವರು ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ನೀಲಿ ಚಿತ್ರ ವೀಕ್ಷಣೆ ಮಾಡುತ್ತಿರುತ್ತಾರೆ ಎಂದು ಬಿಜೆಪಿ ನಾಯಕರಿಗೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇತ್ತೀಚೆಗೆ ಕುಮಾರಸ್ವಾಮಿಯವರನ್ನು ಆರ್ ಎಸ್ ಎಸ್ ಶಾಖೆಗೆ ಬಂದು ಸಂಘದ ಚಟುವಟಿಕೆಗಳನ್ನು ಕಲಿಯುವಂತೆ ಆಹ್ವಾನ ನೀಡಿದ್ದರು.
ಅದಕ್ಕೆ ನಿನ್ನೆ ವಿಜಯಪುರದಲ್ಲಿ ಮಾತನಾಡುತ್ತಾ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು, ನನಗೆ ಅವರ ಸ್ನೇಹ ಬೇಡ. ಆರ್ ಎಸ್ ಎಸ್ ಶಾಖೆಯಲ್ಲಿ ಏನು ಹೇಳಿಕೊಡುತ್ತಾರೆ ಎಂದು ನನಗೆ ಗೊತ್ತಿಲ್ಲವೇ? ವಿಧಾನಸೌಧದಲ್ಲಿ ಹೇಗೆ ವರ್ತಿಸಬೇಕು, ಸದನದಲ್ಲಿ ಕಲಾಪ ನಡೆಯುವಾಗ ಬ್ಲೂ ಫಿಲ್ಮ್ ನೋಡುತ್ತಿರುತ್ತಾರೆ. ಆರ್ ಎಸ್ ಎಸ್ ಶಾಖೆಯಲ್ಲಿ ಅಂತದ್ದನ್ನು ಹೇಳಿಕೊಡುವುದಿಲ್ಲವೇ? ಅಂತಹ ಕೆಟ್ಟ ವಿಷಯಗಳನ್ನು ಕಲಿಯಲು ನಾನು ಆರ್ ಎಸ್ ಎಸ್ ಶಾಖೆಗೆ ಹೋಗಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಉಪ ಚುನಾವಣೆ ಪ್ರಚಾರದ ವೇಳೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನನಗೆ ಬಿಜೆಪಿಯವರ ಆರ್ ಎಸ್ ಎಸ್ ಶಾಖೆ ಬೇಡ. ನಾನು ಇಲ್ಲಿ ಬಡಜನರ ಬಗ್ಗೆ ಕಲಿತ ಶಾಖೆ ಸಾಕು, ಅವರ ಆರ್ ಎಸ್ ಎಸ್ ಶಾಖೆಯಿಂದ ನಾನು ಕಲಿಯುವುದು ಏನೂ ಇಲ್ಲ ಎಂದು ಹೇಳಿದ್ದಾರೆ.