Publish Date: Sun, 28 Nov 2021 (08:33 IST)
Updated Date: Sun, 28 Nov 2021 (09:30 IST)
ಹಾಸನ : ಪ್ರೀತಿಸಿ ಮದುವೆಯಾಗಿ 9 ವರ್ಷಗಳ ಕಾಲ ಸಂಸಾರ ಮಾಡಿ, ಪತ್ನಿಗೆ ಮೋಸ ಮಾಡಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ಮೊದಲ ಮದುವೆ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ಪತಿ ಮುಂದಾಗಿದ್ದು, ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾನೆ. ಹೀಗಾಗಿ ನೊಂದ ಪತ್ನಿ, ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜಿನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ ಹಾಗೂ ಲೋಹಿತ್ 9 ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದಾರೆ. ಆದರೆ ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಜಯಶೀಲಾ ಕಿರುಕುಳ ನೀಡುತ್ತಿದ್ದಾರೆ. ಈಗ ತನ್ನಿಂದ ಗಂಡನನ್ನು ದೂರ ಮಾಡಿ ಮೊದಲ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆ ಮಾಡಿಸುತ್ತಿದ್ದಾರೆ ಎಂದು ಅಕ್ಷತಾ ಆರೋಪ ಮಾಡಿದ್ದಾರೆ.
ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ವಂಚಕ ಪತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಮದುವೆಯಾಗಿ 8 ವರ್ಷದ ಮಗನಿದ್ದರೂ ಬೇರೆ ಮದುವೆಯಾಗಲು ಲೋಹಿತ್ ಕುಟುಂಬ ಮುಂದಾಗಿದ್ದು, ಹುಡುಗಿಗೆ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಲೋಹಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.
ಹೀಗಾಗಿ ಸುಳ್ಳು ಹೇಳಿ ಹುಡುಗಿಯನ್ನು ನಂಬಿಸಿರುವ ಬಗೆಗಿನ ಆಡಿಯೋ ಸಾಕ್ಷಿ ಇಟ್ಟು ಕೊಂಡು ಕಾನೂನು ಹೋರಾಟಕ್ಕೆ ಪತ್ನಿ ಅಕ್ಷತಾ ಸಜ್ಜಾಗಿದ್ದಾರೆ. ಮಾವ ಮಲ್ಲಿಕಾರ್ಜುನ, ಅತ್ತೆ ಜಯಶೀಲ, ಮೈದುನ ದರ್ಶನ್ ಹಾಗೂ ಪತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
Ramya kosira
Publish Date: Sun, 28 Nov 2021 (08:33 IST)
Updated Date: Sun, 28 Nov 2021 (09:30 IST)