ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ನಿಜ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ಇದು ದೃಢಪಟ್ಟಿರುವುದಾಗಿ ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆ ಗೆದ್ದ ಬಳಿಕ ಕಾಂಗ್ರೆಸ್ ಸಂಸದ ಸೈಯದ್ ನಾಸಿರ್ ಹುಸೇನ್ ಬೆಂಬಲಿಗನೊಬ್ಬ ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಈ ವಿಡಿಯೋದ ಸತ್ಯಾಸತ್ಯತೆ ಪರೀಕ್ಷಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜವೆಂದು ಸಾಬೀತಾಗಿದೆ ಎಂದು ಗೃಹಸಚಿವರು ಹೇಳಿದ್ದಾರೆ. ಸರ್ಕಾರ ವರದಿ ಬಂದರೂ ಮುಚ್ಚಿಡುತ್ತಿದೆ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಗೃಹಸಚಿವರು ಈ ಹೇಳಿಕೆ ನೀಡಿದ್ದಾರೆ.
ಇದನ್ನು ನಮ್ಮ ಸರ್ಕಾರ ಹೇಳಿ ಮಾಡಿಸಿರುವುದಿಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಈ ಮೊದಲೂ ಎಫ್ಎಸ್ಎಲ್ ವರದಿ ಬರಲಿ, ಆಮೇಲೆ ಕ್ರಮ ಕೈಗೊಳ‍್ಳುತ್ತೇವೆ ಎಂದಿದ್ದೆವು. ಅದರಂತೆ ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನು, ಬಿಜೆಪಿಯವರು ಏನೋ ಹೇಳ್ತಾರೆ ಎಂದು ಕ್ರಮ ಕೈಗೊಳ್ಳಲು ಆಗುತ್ತಾ? 2022 ರಲ್ಲಿ ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಈಗ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.