ಬೆಂಗಳೂರು: ಇತ್ತೀಚೆಗೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎಫ್ಎಸ್ಎಲ್ ವರದಿಗಳೂ ಘೋಷಣೆ ಕೂಗಿದ್ದು ನಿಜ ಎಂದು ಖಚಿತಪಡಿಸಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವಿನ ನಂತರ ಅವರ ಬೆಂಬಗಲಿರು ವಿಧಾನಸೌಧದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಓರ್ವ ವ್ಯಕ್ತಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ. ಇದನ್ನು ಗಮನಿಸಿದ ಪತ್ರಕರ್ತರು ನಾಸಿರ್ ಹುಸೇನ್ ಗೆ ಪ್ರಶ್ನಿಸಿದಾಗ ಅವರು ಉಡಾಫೆಯ ಉತ್ತರ ನೀಡಿದ್ದರು.
ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಯಿತು. ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಸದನದಲ್ಲೂ ಹೋರಾಠವನ್ನೇ ನಡೆಸಿತು. ಇದರ ಬೆನ್ನಲ್ಲೇ ಎಫ್ಎಸ್ಎಲ್ ವಿಭಾಗ ವಿಡಿಯೋದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜವೇ ಎಂದು ಪರೀಕ್ಷೆಗೊಳಪಡಿಸಿತು.
ಇದೀಗ ಪರೀಕ್ಷೆಯ ವರದಿ ಹೊರಬಂದಿದ್ದು, ಪಾಕ್ ಪರ ಘೋಷಣೆ ಕೂಗಿದ್ದು ನಿಜವೆಂದು ಸಾಬೀತಾಗಿದೆ. ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ವಿಡಿಯೋದಲ್ಲಿರುವ ಧ್ವನಿ ಮ್ಯಾಚ್ ಮಾಡಿ ಆರೋಪಿಯನ್ನು ಬಂಧಿಸಲು ಸಿದ್ಧತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ಅನುಮಾನಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಒಟ್ಟು 26 ಮಂದಿ ಪೈಕಿ 7 ಮಂದಿಯ ವಿಚಾರಣೆ ನಡೆಸಲಾಗಿದ್ದು, ಇವರು ಎಲ್ಲರೂ ಪಾಕ್ ಪರ ಘೋಷಣೆ ಕೂಗಿಲ್ಲ ಎಂದಿದ್ದಾರೆ. ಉಳಿದ 19 ಮಂದಿಯ ವಿಚಾರಣೆ ನಡೆಯುತ್ತಿದೆ.