ಜೆಡಿಎಸ್ ಎಜೆಂಟರಂತೆ ವರ್ತಿಸುತ್ತಾರೆ ಎಂಬ ಆರೋಪ ಹೊತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಅವರು, ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಮುಖವಾಗಿ ಜಂತಕಲ್ ಮೈನಿಂಗ್ ಹಗರಣದ ಕುರಿತಾಗಿ ಮಾತನಾಡಿದ್ದಾರೆ. ಈ ಹಗರಣದಲ್ಲಿ ಮೂರು ಪಕ್ಷಗಳ ಜೆಸಿಬಿಗಳು ಭಾಗಿಯಾಗಿವೆ. ಇದೇ ಹಗರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜನಾರ್ದನ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಿಎಂ ಕುಮಾರಸ್ವಾಮಿ ಕೂಡಾ ರಾಜೀನಾಮೆ ಕೊಡಬೇಕಾಗುತ್ತದೆ. ಮಾಡಿದ್ದುಣ್ಣೋ ಮಾರಾಯ ಅನ್ನೋ ಗಾದೆಯಂತೆ ಸಿಎಂ ರಾಜೀನಾಮೆ ನೀಡಬೇಕಾದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಹಿರೇಮಠ ಭವಿಷ್ಯ ನುಡಿದರು.
ಹಗರಣದಲ್ಲಿ ಸಿಎಂ ಹೆಚ್ಡಿಕೆ ಮೇಲಿದ್ದ ಆರೋಪ
ಜಂತಕಲ್ ಎಂಟರ್ ಪ್ರೈಸಸ್ಗೆ ಗಣಿ ಪರವಾನಗಿ ನವೀಕರಣದಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕುಮಾರಸ್ವಾಮಿ ಮೇಲಿತ್ತು. ಇದರ ವಿಚಾರಣೆಯ ಜವಾಬ್ದಾರಿಯನ್ನು ಎಸ್ಐಟಿಗೆ ವಹಿಸಲಾಗಿತ್ತು. ಅಲ್ಲದೇ ಎಸ್ಐಟಿಯಿಂದ ತನಿಖಾ ವರದಿ ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಆಗುವವರೆಗೂ ಎಸ್ಐಟಿ ತನಿಖೆಗೆ ಸಹಕರಿಸಬೇಕೆಂಬ ಹೈಕೋರ್ಟ್ ನಿರ್ದೇಶನವೂ ಇತ್ತು. ಎಸ್ಐಟಿಯಿಂದ ವಿಚಾರಣೆ ನಡೆದಿದ್ದು, ನಿಗದಿಯಂತೆ ಜಂತಕಲ್ ಮೈನಿಂಗ್ ಪ್ರಕರಣದ ವಿಚಾರಣೆಯನ್ನ ನಾಳೆ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಬೇಕಿತ್ತು. ಆದ್ರೆ ಪ್ರಕರಣದ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ನವೆಂಬರ್ 14ಕ್ಕೆ ಮುಂದೂಡಿದೆ ಎಂದು ಹೇಳಿದ್ರು.
ಏನಿದು ಹಗರಣ?
ಜಂತಕಲ್ ಮೈನಿಂಗ್ ಕಂಪನಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ತಣಿಗೆಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿದ್ದ ಗಣಿಯನ್ನು (ವೇಸ್ಟ್ ಡಂಪ್) ಸಾಗಣೆ ಮಾಡಲು ‘ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ’ಯಿಂದ ಅನುಮತಿ ಸಿಕ್ಕಿರುವಂತೆ ಸೃಷ್ಟಿಸಿದ್ದ ನಕಲಿ ದಾಖಲೆ ಪತ್ರಗಳ ಹಗರಣ ಇದಾಗಿದೆ.