ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಬಂದ್ ಆಗಿರುವ ಶಾಲೆಗಳನ್ನು ಮತ್ತೆ ತೆರೆಯುವಂತೆ ಹೈಕೋರ್ಟ್ ಸೂಚಿಸಿದ ಬೆನ್ನಲೇ ಸಭೆ ನಡೆಸಿದ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ , ಸೋಮವಾರದಿಂದ ಮೊದಲ ಹಂತದಲ್ಲಿ 10 ನೇ ತರಗತಿವರೆಗೆ ಶಾಲೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವರು, ಗೃಹ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹೈಕೋರ್ಟ್ ಶಾಲಾ ಕಾಲೇಜು ಆರಂಭಕ್ಕೆ ಸೂಚಿಸಿದ ಕಾರಣ ಸೋಮವಾರ ಮೊದಲ ಹಂತದಲ್ಲಿ 10 ನೇ ತರಗತಿವರೆಗೆ ಶಾಲೆ ಆರಂಭಿಸಲಾಗುವುದು. ಎರಡನೇ ಹಂತದಲ್ಲಿ ಪಿಯುಸಿ, ಡಿಗ್ರೀ ತರಗತಿ ಆರಂಭವಾಗಲಿದೆ ಎಂದರು.
ರಾಜ್ಯದಲ್ಲಿ ಉಂಟಾದ ಘರ್ಷಣೆಯಿಂದಾಗಿ ಸರ್ಕಾರ 3 ದಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.ಇದೀಗ ಹೈಕೋರ್ಟ್ ಶಿಕ್ಷಣ ಕೇಂದಗಳನ್ನು ಮುಚ್ಚದಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸೋಮವಾರ ಪುನಾರಂಭಿಸಲಾಗುವುದು ಎಂದರು.
ಇನ್ನು ನಾಳೆ ಸಂಜೆ ಎಲ್ಲಾ ಸಚಿವರ, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಆಯಾ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಾಗುವುದು. ಬಳಿಕ ಎಲ್ಲ ಶಾಲಾ – ಕಾಲೇಜು ಆರಂಭಿಸಲು ನಿರ್ಧರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.