Publish Date: Sat, 11 May 2024 (12:07 IST)
Updated Date: Sat, 11 May 2024 (12:11 IST)
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸೋರಿಕೆ ಮಾಡಿದ್ದಾರೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಅವರನ್ನು ಈಗ ಹಳೇ ಕೇಸ್ ನಲ್ಲಿ ಬಂಧಿಸಲಾಗಿದೆ.
ನಿನ್ನೆ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ದೇವರಾಜೇಗೌಡರನ್ನು ಬಂಧಿಸಲಾಗಿದೆ. ದೇವರಾಜೇಗೌಡ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 1 ರಂದು ಪ್ರಕರಣ ದಾಖಲಾಗಿತ್ತು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ಟು ತಡವಾಗಿ ಕ್ರಮ ಕೈಗೊಳ್ಳಲಾಗಿದೆ.
ಸೈಟು ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಗೆ ಸಹಾಯ ಮಾಡುವುದಾಗಿ ನಂಬಿಸಿ ಕಾರಿನಲ್ಲಿ ಸುತ್ತಾಡಿಸಿ ಮೈಕೈ ಮುಟ್ಟಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ ಎಂದು ದೇವರಾಜೇಗೌಡ ವಿರುದ್ಧ ದೂರು ದಾಖಲಾಗಿತ್ತು. ಆ ಪ್ರಕರಣದ ಬಗ್ಗೆ ಇಷ್ಟು ತಡವಾಗಿ ಕ್ರಮ ಕೈಗೊಂಡಿರುವುದು ಪ್ರಶ್ನೆ ಹುಟ್ಟುಹಾಕಿದೆ.
ಇದೀಗ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡ ಪದೇ ಪದೇ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಹೊರಿಸುತ್ತಲೇ ಇದ್ದರು. ಇದರ ಬೆನ್ನಲ್ಲೇ ದೇವರಾಜೇಗೌಡರನ್ನು ಬಂಧಿಸಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ದೇವರಾಜೇಗೌಡ ವಿರುದ್ಧ ಬಲವಾದ ಸಾಕ್ಷಿಯಿದ್ದರೂ ಇದುವರೆಗೆ ಬಂಧಿಸಿರಲಿಲ್ಲ. ಆದರೆ ಈಗ ಡಿಕೆಶಿ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಬಂಧಿಸಿರುವುದು ಎಲ್ಲರ ಪ್ರಶ್ನೆಗೆ ಕಾರಣವಾಗಿದೆ. ತಮ್ಮ ಬಂಧನದ ಸುಳಿವು ಸಿಗುತ್ತಿದ್ದಂತೇ ದೇವರಾಜೇಗೌಡ ತಲೆಮರೆಸಿಕೊಂಡಿದ್ದರು. ಆದರೆ ಈಗ ಪೊಲೀಸರು ಅವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.